ಪಾಟ್ನಾ, ಫೆ 26 (DaijiworldNews/DB): 2024ರಲ್ಲಿ ಬಿಜೆಪಿಮುಕ್ತ ಭಾರತ ನಿರ್ಮಾಣ ಮಾಡಬೇಕು. ಮೈತ್ರಿ ಪಾಲುದಾರ ಪಕ್ಷಗಳು ಇದಕ್ಕಾಗಿ ಈಗಿನಿಂದಲೇ ಕೆಲಸ ಮಾಡಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಕರೆ ನೀಡಿದ್ದಾರೆ.
ಪುರ್ನಿಯಾದಲ್ಲಿ ನಡೆದ ಮಹಾಮೈತ್ರಿ ಉದ್ದೇಶಿಸಿ ದೆಹಲಿಯಿಂದ ಡಿಜಿಟಲ್ ಭಾಷಣ ಮಾಡಿದ ಅವರು, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದ 40 ಕ್ಷೇತ್ರಗಳಲ್ಲಿ ಬಿಜೆಪಿ ಶೂನ್ಯ ಸ್ಥಾನ ಗಳಿಸುವುದು ನಿಶ್ಚಿತ. ದೇಶಾದ್ಯಂತ ವಿಪಕ್ಷಗಳು ಒಟ್ಟಾದರೆ ನೂರು ಸ್ಥಾನ ಗಳಿಸಲೂ ಬಿಜೆಪಿಯಿಂದ ಸಾಧ್ಯವಾಗದು. ಮಹಾಘಟಬಂಧನ್ ಮೂಲಕ ಬಿಜೆಪಿಯನ್ನು ದೇಶದ ಅಧಿಕಾರದಿಂದ ಕೆಳಗಿಳಿಸುವ ಗುರಿಯನ್ನು ಎಲ್ಲಾ ಮೈತ್ರಿ ಪಾಲುದಾರ ಪಕ್ಷಗಳು ಬದ್ದತೆಯಿಂದ ಮಾಡಬೇಕು ಎಂದರು.
ದೇಶದಲ್ಲಿ ಧ್ರುವೀಕರಣ ರಾಜಕಾರಣ ಮಾಡುವಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ತೊಡಗಿಸಿಕೊಂಡಿವೆ. ದಲಿತರು ಮತ್ತು ಸೌಲಭ್ಯ ವಂಚಿತರ ಮೀಸಲಾತಿ ಮುಗಿಸಲು ಬಿಜೆಪಿ ತಂತ್ರ ರೂಪಿಸುತ್ತಿದೆ. ಬಿಜೆಪಿಯನ್ನು ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸಿದರೆ ದೇಶ ಮತ್ತು ಅಲ್ಪಸಂಖ್ಯಾತರ ರಕ್ಷಣೆ ಸಾಧ್ಯ. ಅದಕ್ಕಾಗಿ ಈಗಿಂದಲೇ ಪ್ರತಿಜ್ಞೆ ಮಾಡಿ ಎಂದು ಹೇಳಿದರು.
ವಿಪಕ್ಷಗಳನ್ನು ದೇಶಾದ್ಯಂತ ಒಗ್ಗೂಡಿಸಬೇಕು. ಇಲ್ಲವಾದಲ್ಲಿ ನಮಗೆ ಯಾವುದೇ ಕಾರ್ಯಸಾಧುವಾಗದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ತತ್ಕ್ಷಣ ಕಾರ್ಯಕ್ಷೇತ್ರಕ್ಕಿಳಿಯಬೇಕಾದ ಅಗತ್ಯವಿದೆ ಎಂದವರು ಅಭಿಪ್ರಾಯಪಟ್ಟರು.