ಕೋಲ್ಕತ್ತಾ, ಫೆ 26 (DaijiworldNews/DB): ಸಫಾರಿಗೆ ಹೊರಟಿದ್ದ ಪ್ರವಾಸಿಗರ ಮೇಲೆ ದಾಳಿ ಮಾಡಲು ಬಂದ ಘೇಂಡಾಮೃಗಗಳಿಂದ ರಕ್ಷಿಸಿಕೊಳ್ಳಲು ಹೋಗಿ ವಾಹನ ಕಂದಕಕ್ಕುರುಳಿದ ಘಟನೆ ಜಲ್ದಪಾರಾ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ.
ಜೀಪ್ನಲ್ಲಿ ಪ್ರವಾಸಿಗರು ಸಫಾರಿ ಮಾಡುತ್ತಿದ್ದರು. ಈ ವೇಳೆ ರಸ್ತೆ ಪಕ್ಕದ ಪೊದೆಗಳಲ್ಲಿ ಕಾದಾಟದಲ್ಲಿ ತೊಡಗಿದ್ದ ಘೇಂಡಾಮೃಗಗಳನ್ನು ಕ್ಯಾಮರಾಗಳಲ್ಲಿ ಸೆರೆ ಹಿಡಿಯಲು ಪ್ರವಾಸಿಗರು ಮುಂದಾದರು. ಪ್ರವಾಸಿಗರು ಫೋಟೋ, ವೀಡಿಯೋ ಚಿತ್ರೀಕರಿಸುವುದರಲ್ಲಿ ಮಗ್ನರಾಗಿದ್ದಾಗ ಕಾದಾಟದಲ್ಲಿ ತೊಡಗಿದ್ದ ಘೇಂಡಾಮೃಗಗಳು ಇವರತ್ತ ನೋಡಿದ್ದಾರೆ. ಕೂಡಲೇ ಪ್ರವಾಸಿಗರತ್ತ ಓಡಿ ಬಂದಿದ್ದಾರೆ. ಘೇಂಡಾಮೃಗಗಳು ದಾಳಿಗೆ ಬರುತ್ತಿರುವುದನ್ನು ನೋಡಿದ ಚಾಲಕ ಕೂಡಲೇ ವಾಹನ ಚಲಾಯಿಸಲು ಯತ್ನಿಸಿದ್ದಾರೆ. ಆದರೆ ಜೀಪು ಸ್ಕಿಡ್ ಆಗಿ ಕಂದಕಕ್ಕೆ ಉರುಳಿ ಬಿದ್ದಿದೆ.
ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು, ಕೆಲವರ ಮೂಳೆ ಮುರಿದಿದೆ. ಕೂಡಲೇ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರು ಗಂಭೀರ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರವಾಸಿಗರ ಮೇಲೆ ಘೇಂಡಾಮೃಗ ದಾಳಿ ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.