ಪಶ್ಚಿಮ ಬಂಗಾಳ, ಫೆ 26 (DaijiworldNews/HR): ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಶಾಲಾ ಬಾಲಕಿಯೊಬ್ಬಳು ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಗೊಂದಲಕ್ಕೊಳಗಾಗಿ ದಾರಿ ತಪ್ಪಿ ಅಸಹಾಯಕಳಾಗಿ ಅಳುತ್ತಾ ನಿಂತಿದ್ದು, ಇದನ್ನು ಅಲ್ಲಿಯೇ ಕರ್ತವ್ಯದಲ್ಲಿದ್ದ ಇನ್ಸ್ಪೆಕ್ಟರ್, ಸೌವಿಕ್ ಚಕ್ರವರ್ತಿ ಗಮನಿಸಿ ಆಕೆಯನ್ನು 'ಜೀರೋ ಟ್ರಾಫಿಕ್' ನಲ್ಲಿ ಕರೆದೊಯ್ದಿದ್ದಾರೆ.
ಬಾಲಕಿ ಬಳಿ ತೆರಳಿ ವಿಚಾರಿಸಿದ ವೇಳೆ ಕುಟುಂಬ ಸದಸ್ಯರು ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗಾಗಿ ತೆರಳಿದ್ದರಿಂದ ಒಬ್ಬಂಟಿಯಾಗಿ ಪರೀಕ್ಷೆಗೆ ಬಂದಿದ್ದೆ. ಆದರೆ ನನಗೆ ದಾರಿ ಗೊತ್ತಾಗುತ್ತಿಲ್ಲ ಎಂದು ಅಳುತ್ತಲೇ ವಿಷಯ ತಿಳಿಸಿದ್ದಾಳೆ.
ಇನ್ನು ಆಕೆಯಿಂದ ಎಲ್ಲ ಮಾಹಿತಿ ಪಡೆದ ಸೌವಿಕ್ ಚಕ್ರವರ್ತಿ ತಮ್ಮ ಅಧಿಕೃತ ವಾಹನದಲ್ಲಿ ಹತ್ತಿಸಿಕೊಂಡು ಆಕೆ ಪರೀಕ್ಷಾ ಕೇಂದ್ರಕ್ಕೆ ತೆರಳುವ ಶಯಾಮ್ ಬಜಾರ್ ನ ಆದರ್ಶ ಶಿಕ್ಷಾ ನಿಕೇತನ್ ಮಾರ್ಗದ ಉದ್ದಕ್ಕೂ ಗ್ರೀನ್ ಕಾರಿಡಾರ್ ಮಾಡಲು ಪೊಲೀಸ್ ಕಂಟ್ರೋಲ್ ರೂಮಿಗೆ ತಿಳಿಸಿದ್ದು, ಹೀಗಾಗಿ ವಿದ್ಯಾರ್ಥಿನಿ ಸಕಾಲಕ್ಕೆ ತನ್ನ ಪರೀಕ್ಷಾ ಕೇಂದ್ರ ತಲುಪಿದ್ದಾಳೆ.