ನವದೆಹಲಿ, ಫೆ 26 (DaijiworldNews/DB): ದೆಹಲಿ ಅಬಕಾರಿ ನೀತಿ ಹಗರಣ ವಿಚಾರವಾಗಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಇಂದು ಸಿಬಿಐ ವಿಚಾರಣೆಗೆ ಹಾಜರಾಗಲಿದ್ದಾರೆ. ಒಂದಷ್ಟು ಕಾಲ ಜೈಲಿನಲ್ಲಿರಲೂ ನಾನು ಸಿದ್ದ ಎಂದು ಅವರು ಹೇಳಿದ್ದಾರೆ.
ವಿಚಾರಣೆಗೆ ತೆರಳುತ್ತಿರುವ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಸಿಸೋಡಿಯಾ, ವಿಚಾರಣೆಗಾಗಿ ಇಂದು ಮತ್ತೆ ಸಿಬಿಐ ಮುಂದೆ ಹಾಜರಾಗುತ್ತಿದ್ದೇನೆ. ಎಲ್ಲಾ ರೀತಿಯ ಸಹಕಾರವನ್ನು ವಿಚಾರಣೆ ಹಿನ್ನೆಲೆಯಲ್ಲಿ ನೀಡಲಾಗುವುದು. ನಿಮ್ಮೆಲ್ಲರ ಆಶೀರ್ವಾದ ನನ್ನೊಂದಿಗಿದೆ. ಮುಂದೆ ಜೈಲಿನಲ್ಲಿ ಒಂದಷ್ಟು ಕಾಲ ಕಳೆಯಬೇಕಾಗಿ ಬಂದರೂ ನಾನದಕ್ಕೆ ಸಿದ್ದನಿದ್ದೇನೆ ಎಂದಿದ್ದಾರೆ.
ನಾನೆಂದೂ ಭಗತ್ ಸಿಂಗ್ ಅನುಯಾಯಿ. ಅವರು ದೇಶಕ್ಕಾಗಿ ಗಲ್ಲಿಗೇರಿದರು. ಹಾಗಂದ ಮೇಲೆ ಸುಳ್ಳು ಆರೋಪಗಳಿಂದ ಜೈಲು ಸೇರುವುದು ದೊಡ್ಡ ವಿಷಯವೇನಲ್ಲ ಎಂದು ಬರೆದುಕೊಂಡಿದ್ದಾರೆ.
ಇನ್ನು ಈ ವಿಚಾರವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರೂ ಟ್ವೀಟ್ ಮಾಡಿದ್ದು, ಲಕ್ಷಾಂತರ ಮಕ್ಕಳು ಮತ್ತು ಪೋಷಕರ ಆಶೀರ್ವಾದ ನಿಮ್ಮ ಮೇಲಿದೆ. ದೇಶ, ಸಮಾಜಕ್ಕೆ ಒಳ್ಳೆಯದು ಮಾಡಿದಕ್ಕಾಗಿ ಜೈಲಿಗೆ ಹೋಗುವುದು ಶಾಪವಲ್ಲ, ಅದೊಂದು ಕೀರ್ತಿ. ಶೀಘ್ರ ಜೈಲಿನಿಂದ ವಾಪಾಸ್ ಬರುವಂತಾಗಲಿ ಎಂದು ಪ್ರಾರ್ಥನೆ ಎಂದಿದ್ದಾರೆ.