ಬೆಂಗಳೂರು, ಫೆ 26 (DaijiworldNews/MS): ನಾಳೆ ಬೆಳಗಾವಿ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಸಣ್ಣ ರೈತರ ಆರ್ಥಿಕ ಕೃಷಿಗಾರಿಕೆಗೆ ಹಣಕಾಸು ನೆರವು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನೀಡುತ್ತಿರುವ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಅಡಿ 13ನೇ ಕಂತಿನ 16,000 ಕೋಟಿ ರೂ.ಗಳನ್ನು 8 ಕೋಟಿಗೂ ಅಧಿಕ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ಬಿಡುಗಡೆ ಮಾಡಲಿದ್ದಾರೆ. ಇದರಿಂದ ದೇಶದ 8 ಸಾವಿರ ರೈತರಿಗೆ 16 ಸಾವಿರ ಕೋಟಿ ರೂ. ಬಿಡುಗಡೆಯಾಗಲಿದೆ.
ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು, ನವೀಕೃತಗೊಂಡ ಬೆಳಗಾವಿ ರೈಲು ನಿಲ್ದಾಣವನ್ನು ರಾಷ್ಟ್ರಕ್ಕೆ ಸಮರ್ಪಿಸುವರು. ಪ್ರಧಾನಿ ಅವರು, ಬೆಳಗಾವಿ ವಲಯದ ಲೋಂಡಾ – ಬೆಳಗಾವಿ – ಘಟಪ್ರಭಾ ಮಾರ್ಗದ ರೈಲು ಮಾರ್ಗ ಜೋಡಿ ಪಥವನ್ನು ಪ್ರಧಾನಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಈ ಯೋಜನೆಯನ್ನು 930 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಜನದಟ್ಟಣೆ ಇರುವ ಮುಂಬೈ-ಪುಣೆ-ಹುಬ್ಬಳ್ಳಿ-ಬೆಂಗಳೂರು ರೈಲು ಮಾರ್ಗದ ಸಾಮರ್ಥ್ಯವನ್ನು ವೃದ್ಧಿಸಲಿದೆ. ಇದು ಆ ಭಾಗದಲ್ಲಿ ವ್ಯಾಪಾರ, ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕೆ ಸಹಕಾರಿಯಾಗಲಿದೆ.