ನವದೆಹಲಿ, ಫೆ 26 (DaijiworldNews/DB): ಮನ್ ಕಿ ಬಾತ್ನ 98 ನೇ ಆವೃತ್ತಿಯನ್ನುದ್ದೇಶಿಸಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದರು. ಈ ವೇಳೆ ಸರ್ದಾರ್ ಪಟೇಲ್ ಜನ್ಮದಿನದ ಏಕತಾ ದಿನದಂದು ಮನ್ ಕಿ ಬಾತ್ನಲ್ಲಿ ಪ್ರಕಟಿಸಲಾಗಿದ್ದ ಸ್ಪರ್ಧೆಗಳ ಪೈಕಿ ಲಾಲಿಹಾಡು ಸ್ಪರ್ಧೆಯಲ್ಲಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಿ.ಎಂ. ಮಂಜುನಾಥ್ ಪ್ರಥಮ ಬಹುಮಾನ ಪಡೆದಿರುವುದಾಗಿ ಪ್ರಧಾನಿ ಘೋಷಿಸಿದರು.
ಸರ್ದಾರ್ ಪಟೇಲ್ ಅವರ ಜನ್ಮ ದಿನವಾದ ಏಕತಾ ದಿನದಂದು ದೇಶಭಕ್ತಿಗೀತೆ, ಲಾಲಿಹಾಡು ಮತ್ತು ರಂಗೋಲಿ ಸ್ಪರ್ಧೆಗಳನ್ನು ಪ್ರಕಟಿಸಲಾಗಿತ್ತು. ದೇಶಾದ್ಯಂತ 700 ಜಿಲ್ಲೆಗಳಿಂದ ಐದು ಲಕ್ಷಕ್ಕೂ ಹೆಚ್ಚು ಜನರು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ ಎಂಬುದು ಖುಷಿಯ ಸಂಗತಿ. ಲಾಲಿಹಾಡು ವಿಭಾಗದ ಸ್ಪರ್ಧೆಯಲ್ಲಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಿ.ಎಂ. ಮಂಜುನಾಥ್ ಪ್ರಥಮ ಬಹುಮಾನ ಪಡೆದಿದ್ದಾರೆ ಎಂದರು.
ಮಂಜುನಾಥ್ ಕನ್ನಡದಲ್ಲಿ ಬರೆದ 'ಮಲಗು ಕಂದ’ ಹಾಡಿಗಾಗಿ ಪ್ರಥಮ ಬಹುಮಾನ ಬಂದಿದೆ. ತಾಯಿ ಮತ್ತು ಅಜ್ಜಿಯ ಲಾಲಿ ಹಾಡುಗಳ ಸ್ಪೂರ್ತಿಯಿಂದ ಅವರು ಈ ಹಾಡು ಬರೆದಿದ್ದಾರೆ ಎಂದು ಮೋದಿ ಹೇಳಿದರು.
ಡಿಜಿಟಲ್ ಇಂಡಿಯಾದ ಸಾಮರ್ಥ್ಯ ದೇಶದ ಮೂಲೆ ಮೂಲೆಗೂ ತಲುಪುತ್ತಿದೆ. ಇ-ಸಂಜೀವಿನಿ ಆಪ್ ಮೂಲಕ ವೈದ್ಯರೊಂದಿಗೆ ಮನೆಯಿಂದಲೇ ಸಮಾಲೋಚನೆ ಸಾಧ್ಯವಾಗುತ್ತಿದೆ. ಇದಕ್ಕಾಗಿ ಜನರು ಹಾಗೂ ವೈದ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇಂದು ಅನೇಕ ದೇಶಗಳು ಯುಪಿಐ ಕಡೆಗೆ ಆಕರ್ಷಣೆ ಹೊಂದುತ್ತಿವೆ. ಈಗಾಗಲೇ ಭಾರತ ಮತ್ತು ಸಿಂಗಾಪುರದ ನಡುವೆ ಯುಪಿಐ-ಪೇ ವ್ಯವಸ್ಥೆ ಆರಂಭವಾಗಿದ್ದು, ಉಭಯ ದೇಶಗಳ ನಡುವಿನ ಹಣ ವರ್ಗಾವಣೆ ಸುಲಭವಾಗಿದೆ. ಇದು ಜೀವನಕ್ರಮದಲ್ಲಿಯೂ ಸಾಕಷ್ಟು ಬದಲಾವಣೆಗೆ ಕಾರಣವಾಗಲಿದೆ ಎಂದು ಅವರು ಪ್ರತಿಪಾದಿಸಿದರು.
ಪ್ಲಾಸ್ಟಿಕ್ ಚೀಲಗಳನ್ನು ಬಟ್ಟೆ ಚೀಲಗಳಿಗೆ ಬದಲಾಯಿಸುವ ಪ್ರತಿಜ್ಞೆ ಮಾಡೋಣ. ನೀವು ಇಂತಹ ಪ್ರತಿಜ್ಞೆ ಕೈಗೊಂಡರೆ ಅದು ಲಕ್ಷಾಂತರ ಜನರಿಗೆ ಪ್ರೇರಣೆಯಾಗುತ್ತದೆ, ನಿಮಗೂ ತೃಪ್ತಿ ನೀಡುತ್ತದೆ. ಭಾರತದ ಗೊಂಬೆಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಇವೆಲ್ಲವೂ ನಮ್ಮ ದೇಶದ ಸಾಧನೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.