ಬಳ್ಳಾರಿ, ಫೆ 26 (DaijiworldNews/DB): ಸೀರೆ, ಕುಕ್ಕರ್ ಹಂಚುವವರು ಅದೇ ಕೆಲಸ ಮಾಡಲಿ. ನಾನು ಕ್ಷೇತ್ರದ ಜನರಿಗೆ ಮನೆ ಹಕ್ಕುಪತ್ರ ವಿತರಿಸುತ್ತೇನೆ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ನೂತನ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬಳ್ಳಾರಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಜನಾರ್ದನ ರೆಡ್ಡಿ ಪತ್ನಿ ಅರುಣಾ ರೆಡ್ಡಿ ಹಾಗೂ ಪುತ್ರಿ ಬ್ರಹ್ಮಿಣಿ ಮತದಾರರಿಗೆ ಸೀರೆ ಹಂಚುತ್ತಿರುವ ವಿಚಾರವಾಗಿ ಅತ್ತಿಗೆಗೆ ಟಾಂಗ್ ನೀಡಿದ ಸೋಮಶೇಖರ್ ರೆಡ್ಡಿ, ಬಳ್ಳಾರಿ ನಗರದ 12,800 ಮನೆಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದೇನೆ. ಇದರ ಮುಂದೆ ಸೀರೆ, ಕುಕ್ಕರ್ ಲೆಕ್ಕವಿಲ್ಲ. ಈ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದು ಹೋಗಿದ್ದು, ಶೀಘ್ರ ಮೋದಿ ಆಗಮಿಸಲಿದ್ದಾರೆ ಎಂದರು.
ಯಡಿಯೂರಪ್ಪ ಅವರೊಬ್ಬ ಉತ್ತಮ ಹಿರಿಯ ನಾಯಕ. ಅವರು ಬಳ್ಳಾರಿ ನಗರ ಕ್ಷೇತ್ರಕ್ಕೆ ಬಂದು ಸ್ಪರ್ಧೆ ಮಾಡುವುದಾದರೆ ಖಂಡಿತಾ ಕ್ಷೇತ್ರ ಬಿಟ್ಟುಕೊಡುತ್ತೇನೆ. ಅವರು ಇಲ್ಲಿ ಸ್ಪರ್ಧಿಸಿದರೆ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಡಾ. ಕೆ. ಸುಧಾಕರ್ ಅವರಿಗೆ ಪ್ರಣಾಳಿಕ ಸಮಿತಿ ಜವಾಬ್ದಾರಿ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜ್ಞಾನ ಇದ್ದವರಿಗೆ ಅವಕಾಶ ಸಿಗುತ್ತದೆ ಎಂದು ಸುಧಾಕರ್ ವಿರುದ್ದ ಪರೋಕ್ಷ ಅಸಮಾಧಾನ ಹೊರ ಹಾಕಿದರು.