ಅಹಮದಾಬಾದ್, ಫೆ 26 (DaijiworldNews/DB): ವ್ಯಕ್ತಿಯೊಬ್ಬ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ.
ವಸಂತ್ ರಾಥೋಡ್ (34) ಮೃತ ವ್ಯಕ್ತಿ. ರಾಜ್ಯ ಸರಕು ಹಾಗೂ ಸೇವಾ ತೆರಿಗೆ ಇಲಾಖೆಯಲ್ಲಿ ಹಿರಿಯ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದ ವಸಂತ್ ಎಂದಿನಂತೆ ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತ ಉಂಟಾಗಿದೆ. ಇದರಿಂದ ಆಟದ ಮೈದಾನದಲ್ಲಿಯೇ ಕುಸಿದು ಬಿದ್ದಿದ್ದಾರೆ.
ಕ್ರಿಕೆಟ್ ಆಟದ ವೇಳೆ ವಸಂತ್ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಅವರಿಗೆ ಆಯಾಸ ಉಂಟಾಗಿ ಕುಸಿದು ಬಿದ್ದಿದ್ದಾರೆ. ಇತರ ಆಟಗಾರರು ಕೂಡಲೇ ವಸಂತ್ ಅವರನ್ನು ಮೇಲಕ್ಕೆತ್ತಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.