ರಾಯ್ಪುರ, ಫೆ 26 (DaijiworldNews/DB): ಒಗ್ಗಟ್ಟು, ಶಿಸ್ತು ಮತ್ತು ದೃಢವಾದ ಸಂಕಲ್ಪಗಳ ಮೂಲಕ ಪಕ್ಷ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಪ್ರತಿಯೊಬ್ಬರೂ ಸಂಘಟಿತರಾಗಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಪಕ್ಷದ 85ನೇ ಸರ್ವಸದಸ್ಯರ ಸಭೆಯ ಸಮಾರೋಪದಲ್ಲಿ ಭಾನುವಾರ ಮಾತನಾಡಿದ ಅವರು, ಅಧಿವೇಶನ ಇಂದು ಕೊನೆಗೊಳ್ಳಬಹುದು. ಆದರೆ ಕಾಂಗ್ರೆಸ್ನ ನವ ಆರಂಭಕ್ಕೆ ಇದು ದಿಕ್ಸೂಚಿ. ಪಕ್ಷ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳನ್ನು ಸಮರ್ಥವಾಗಿ ನಿಭಾಯಿಸಿ ಪರಿಹಾರ ಕಂಡುಕೊಳ್ಳಬೇಕಾದ ತುರ್ತು ಜರೂರತ್ತಿದೆ. ಅದಕ್ಕೆ ಒಗ್ಗಟ್ಟು, ಶಿಸ್ತು, ಸಂಕಲ್ಪ ಮುಖ್ಯ ಎಂದು ಪ್ರತಿಪಾದಿಸಿದರು.
ಪಕ್ಷದ ಬಲದಲ್ಲಿ ನಮ್ಮ ಶಕ್ತಿ ಇದೆ. ರಾಷ್ಟ್ರ ಮಟ್ಟದ ನಮ್ಮೆಲ್ಲಾ ಕೆಲಸಗಳು ಪ್ರತಿ ಹಂತದ ಸಹದ್ಯೋಗಿಗಳಿಗೂ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರಬಲ್ಲದು. ಅದಕ್ಕಾಗಿ ಇಲ್ಲಿಂದ ಇಡುವ ಪ್ರತಿ ಹೆಜ್ಜೆಯೂ ಪಕ್ಷದ ಉತ್ತುಂಗದ ಆಶೋತ್ತರವನ್ನು ಹೊಂದಿರಬೇಕು. ಧನಾತ್ಮಕ ಕೆಲಸಗಳ ಮೂಲಕ ಪಕ್ಷ ಬಲವರ್ಧನೆಗೆ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದರು.
ದಿನದಿಂದ ದಿನಕ್ಕೆ ಜನರ ನಿರೀಕ್ಷೆಗಳು ಬದಲಾವಣೆಯಾಗುತ್ತಲೇ ಇರುತ್ತವೆ. ಆ ಬದಲಾವಣೆಗಳಿಗೆ ತಕ್ಕಂತೆ ಹೊಸ ಸವಾಲುಗಳು ನಮ್ಮೆದುರು ತೆರೆದುಕೊಳ್ಳುತ್ತದೆ. ಅದಕ್ಕೆ ಹೊಸ ಮಾರ್ಗ ಕುಡುಕಿ ಕಾರ್ಯತತ್ಪರರಾಗಬೇಕು ಎಂದು ಅವರು ಇದೇ ವೇಳೆ ಸಲಹೆ ಮಾಡಿದರು.
ರಾಜಕೀಯ ಮತ್ತು ಸಾಮಾಜಿಕ ಕೆಲಸಗಳಿಗೆ ಕೊನೆ ಎಂಬುದಿಲ್ಲ. ಅದರಲ್ಲಿ ನಮ್ಮ ಬದ್ದತೆ, ಪ್ರಾಮಾಣಿಕತೆಯನ್ನು ತೋರಿಸಿಕೊಂಡು ಹೋಗಬೇಕು ಎಂದರು.