ಶಿವಮೊಗ್ಗ, ಫೆ 26 (DaijiworldNews/SM): ಮಾಜಿ ಸಿಎಂ ಯಡಿಯೂರಪ್ಪ ಯಾವುದೋ ಒಂದು ವರ್ಗದ, ಜಾತಿಯ ನಾಯಕರಲ್ಲ. ಬದಲಾಗಿ ಅವರು ಜಾತ್ಯಾತೀತ ನಾಯಕ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಬಿಎಸ್ ವೈ ಅವರು ಎಲ್ಲಾ ವರ್ಗಕ್ಕೂ ಅನುದಾನ ನೀಡಿರುವುದು ಇದನ್ನು ಸಾಬೀತುಪಡಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಬಿ.ವೈ.ವಿಜಯೇಂದ್ರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಯಡಿಯೂರಪ್ಪ ಅವರ ದೂರ ದೃಷ್ಟಿಯಿಂದ ರಾಜ್ಯದಲ್ಲೆ 2ನೇ ದೊಡ್ಡ ವಿಮಾನ ನಿಲ್ದಾಣ ಶಿವಮೊಗ್ಗದಲ್ಲಿ ನಿರ್ಮಾಣಗೊಂಡಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಹೊರತುಪಡಿಸಿದರೆ ಶಿವಮೊಗ್ಗ ಏರ್ಪೋರ್ಟ್ ರಾಜ್ಯದಲ್ಲಿ ಅತಿ ದೊಡ್ಡದು.ಯಡಿಯೂರಪ್ಪ ಅವರ ಜನ್ಮ ದಿನದಂದೇ ವಿಮಾನ ನಿಲ್ದಾಣ ಉದ್ಘಾಟನೆಯಾಗುತ್ತಿರುವುದು ಖುಷಿಯ ಸಂಗತಿ.ಮಲೆನಾಡು ಜಿಲ್ಲೆಗಳಿಗೆ ಮಾತ್ರವಲ್ಲದೆ ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳಿಗೂ ಈ ಏರ್ಪೋರ್ಟ್ ನಿಂದ ಅನುಕೂಲವಾಗಲಿದೆ ಎಂದರು.
ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ, ರಾಜಕೀಯದಿಂದಲ್ಲ.ಜೊತೆಗೆ ಅವರು ಪ್ರತಿನಿಧಿಸುತಿದ್ದ ಶಿಕಾರಿಪುರ ಕ್ಷೇತ್ರಕ್ಕೆ ನನ್ನನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ವಿಪಕ್ಷಗಳ ಶಾಸಕರು ಕೂಡ ಅನುದಾನ ಕೊಟ್ಟ ಬಗ್ಗೆ ಹೇಳಿಕೊಂಡಿದ್ದಾರೆ. ಪಕ್ಷ ಅಧಿಕಾರಕ್ಕೆ ತರಲು ನಿರಂತರ ಓಡಾಟ ಮಾಡುತ್ತಾರೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದರು.