ಭಟ್ಕಳ, ಫೆ 26 (DaijiworldNews/SM): ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳನ್ನು ಪೊಲೀಸರು ಶಿವಮೊಗ್ಗದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಲೆಮರೆಸಿಕೊಂಡಿದ್ದ ವಿನಯ್ ಭಟ್, ಶ್ರೀಧರ್ ಭಟ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಮೃತರ ಪುತ್ರಿ ಜಯಾ ಅಡಿಗ ನೀಡಿರುವ ದೂರಿನ ಮೇರೆಗೆ ಆರೋಪಿಗಳಾದ ಸೊಸೆ ವಿದ್ಯಾಭಟ್, ಶ್ರೀಧರ್ ಭಟ್ ನನ್ನು ಪೊಲೀಸರು ಆರಂಭದಲ್ಲೇ ವಶಕ್ಕೆ ಪಡೆದಿದ್ದಾರೆ.
ಹಾಡವಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರದಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಹಾಡವಳ್ಳಿ ನಿವಾಸಿಗಳಾದ ಶಂಭು ವೆಂಕಟ್ರಮಣ ಭಟ್ಟ (70) ಮಾದೇವಿ ಶಂಭು ಭಟ್ಟ (62), ರಾಜೀವಶಂಭು ಭಟ್ಟ(36), ಕುಸುಮಾ ರಾಜೀವ ಭಟ್ಟ (31) ಕೊಲೆಯಾದವರು. ಅದೃಷ್ಟವಶಾತ್ ಕುಸುಮಾ ದಂಪತಿಯ ಮಗು ನಿದ್ರಿಸುತ್ತಿದ್ದ ಕಾರಣ ಬಚಾವ್ ಆಗಿದೆ.
3-4 ತಿಂಗಳ ಹಿಂದಷ್ಟೆ ವಿದ್ಯಾ ಭಟ್ ಪತಿ ನಿಧನರಾಗಿದ್ದರು. ಈ ಮಧ್ಯೆ ಜೀವನಾಂಶ ನೀಡುವಂತೆ ಸೊಸೆ ವಿದ್ಯಾ ಭಟ್ ಬೇಡಿಕೆ ಇಟ್ಟಿದ್ದರು. ಆಸ್ತಿ ವಿಚಾರವಾಗಿ ಗಂಡನ ಕುಟುಂಬದ ಜೊತೆ ವಿದ್ಯಾ ಭಟ್ ಗಲಾಟೆ ಮಾಡಿದ್ದರು ಎನ್ನಲಾಗುತ್ತಿದೆ. ಗಂಡನ ಮನೆಯವರು 6 ಎಕರೆ ಜಮೀನು ಹೊಂದಿದ್ದರು. ಇದರಲ್ಲಿ 1 ಎಕರೆ 9 ಗುಂಟೆ ಭೂಮಿ ನೀಡಿದ್ದರು. ಆದರೆ ಸೊಸೆ ವಿದ್ಯಾ 3 ಎಕರೆ ಜಮೀನು ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದರಿಂದ ಜಗಳ ನಡೆದಿತ್ತು ಎನ್ನಲಾಗಿದೆ.