ನವದೆಹಲಿ, ಫೆ 27 (DaijiworldNews/MS): ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸೋಮವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. 60 ಕ್ಷೇತ್ರಗಳಿರುವ ಎರಡೂ ರಾಜ್ಯಗಳಲ್ಲೂ ತಲಾ 59 ಕ್ಷೇತ್ರಗಳಿಗೆ ಮಾತ್ರ ಮತದಾನ ನಡೆಯಲಿದೆ.
ಎರಡೂ ರಾಜ್ಯಗಳಲ್ಲೂ ಉಗ್ರರ ದಾಳಿಯ ಭೀತಿ ಇರುವುದರಿಂದ ಬಿಗಿಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಜನರು ಈಗಾಗಲೇ ಸಾಲುಗಟ್ಟಿ ತಮ್ಮ ಹಕ್ಕನ್ನು ಸಾಧಿಸಲು ಮತಗಟ್ಟೆಗಳ ಮುಂದೆ ನಿಂತಿದ್ದಾರೆ.
60 ಕ್ಷೇತ್ರವಿರುವ ನಾಗಾಲ್ಯಾಂಡ್ನ ಕ್ಷೇತ್ರವೊಂದರಲ್ಲಿ ಅವಿರೋಧ ಆಯ್ಕೆ ನಡೆದಿದೆ. ಪ್ರತಿಸ್ಪರ್ಧಿ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದುಕೊಂಡ ಕಾರಣ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೇಘಾಲಯದ ಶಿಲ್ಲಾಂಗ್ ವಿಧಾನಸಭಾ ಕ್ಷೇತ್ರದ ಯುನೈಟೆಡ್ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಎಚ್.ಡಿ.ಆರ್. ಲಿಂಗ್ಡೊ ಅವರು ಮೃತಪಟ್ಟಿರುವುದರಿಂದ ಆ ಕ್ಷೇತ್ರದ ಮತದಾನವನ್ನು ಮುಂದೂಡಲಾಗಿದೆ.
ತ್ರಿಪುರಾ ಜೊತೆಗೆ ಮೇಘಾಲಯ ಮತ್ತು ನಾಗಾಲ್ಯಾಂಡ್ ಮತದಾನದ ಫಲಿತಾಂಶ ಮಾರ್ಚ್ 2 ರಂದು ಹೊರ ಬೀಳಲಿದೆ.
ಮತದಾರರಿಗೆ ಪ್ರಧಾನಿ ಮನವಿ: ಮೇಘಾಲಯ ಮತ್ತು ನಾಗಾಲ್ಯಾಂಡ್ ಎರಡೂ ರಾಜ್ಯಗಳ ಮತದಾರರು ವಿಶೇಷವಾಗಿ ಮೊದಲ ಬಾರಿ ಮತ ಚಲಾಯಿಸುವವರು ಮತ್ತು ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಹಕ್ಕು ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.