ತಿರುವನಂತಪುರ, ಫೆ 27 (DaijiworldNews/MS): ಆಧುನಿಕ ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್’ಗೆ ತೆರಳಿ ನಾಪತ್ತೆಯಾಗಿದ್ದ ಕೇರಳದ ರೈತ ಭಾರತಕ್ಕೆ ವಾಪಾಸಾಗಿದ್ದಾರೆ.
ಹೊಸ ಕೃಷಿ ತಂತ್ರಗಳ ಕುರಿತು ಅಧ್ಯಯನಕ್ಕೆಂದು ಭಾರತದ ತಂಡ ಇಸ್ರೇಲ್ಗೆ ತೆರಳಿತ್ತು. ಈ ಭೇಟಿ ಪೂರ್ಣಗೊಳಿಸಿ ಫೆ.17 ಭಾರತಕ್ಕೆ ಹಿಂದಿರುಗಬೇಕಿತ್ತು. ಆದರೆ ಈ ಮಧ್ಯೆ ಪ್ರವಾಸಕ್ಕೆ ತೆರಳಿದ್ದ ಕಣ್ಣೂರು ಜಿಲ್ಲೆಯ ಉಲಿಕಲ್ ನಿವಾಸಿಯಾಗಿರುವ ಬಿಜು ಕುರಿಯನ್ ನಾಪತ್ತೆಯಾಗಿದ್ದರು. ಇದೀಗ ಸ್ಥಳೀಯರ ನೆರವಿನಿಂದ ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗಿದ್ದಾರೆ.
ಬಿಜು ಕುರಿಯನ್ ಅವರು ಕೇರಳ ರೈತ ನಿಯೋಗದ 28 ಸದಸ್ಯರ ಪೈಕಿ ಒಬ್ಬರಾಗಿದ್ದರು. ಇಸ್ರೇಲ್ಗೆ ಭೇಟಿ ನೀಡಿದ್ದ ವೇಳೆ ಫೆ.17ರಂದು ನಿಯೋಗ ಕೇರಳಕ್ಕೆ ಮರಳಬೇಕಿದ್ದ ದಿನದಂದು ಬಿಜು ಕುರಿಯನ್ ಇಸ್ರೇಲ್ನಿಂದ ನಾಪತ್ತೆಯಾಗಿದ್ದರು. ಅವರನ್ನು ಹುಡಕಲು ಸ್ಥಳೀಯ ಸರ್ಕಾರ ಪ್ರಯತ್ನ ಪಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಇಸ್ರೇಲ್ ಪೋಲಿಸ್, ಬಿಜು ಕುರಿಯನ್ ಅವರನ್ನು ಇಸ್ರೇಲ್ನ ಹಳ್ಳಿಯೊಂದರಲ್ಲಿ ಪತ್ತೆಹಚ್ಚಿದ್ದರು, ಇದು ಮಲಯಾಳಿ ಸಮುದಾಯದ ಗಣನೀಯ ಜನಸಂಖ್ಯೆಯನ್ನು ಹೊಂದಿದೆ.
ಭಾರತಕ್ಕೆ ಆಗಮಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ʻಕೇರಳ ಸರ್ಕಾರ, ರಾಜ್ಯ ಕೃಷಿ ಸಚಿವ ಪಿ. ಪ್ರಸಾದ್ ಹಾಗೂ 27ಸದಸ್ಯರ ನಿಯೋಗ, ಅಧಿಕಾರಿಗಳಿಗೆ ಕ್ಷಮೆ ಯಾಚಿಸುತ್ತೇನೆʼ ಎಂದು ಭಾವುಕರಾದರು. ಜೆರುಸಲೇಮ್ ಮತ್ತು ಬೆತ್ಲಹೇಮ್ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವ ಉದ್ದೇಶದಿಂದ ತೆರಳಿದ್ದ ಅವರು ಈ ಮಧ್ಯೆ ನಾಪತ್ತೆಯಾಗಿದ್ದರು.
ಇದೀಗ ಅವರ ಸಹೋದರನ ಸಹಾಯದಿಂದ ಅವರು ಭಾರತಕ್ಕೆ ಮರಳಿದ್ದಾರೆ. ಮೇ 8 ರವರೆಗೆ ಅವರ ವೀಸಾ ಅವಧಿ ಇದ್ದದ್ದರಿಂದ ಹೆಚ್ಚಿನ ಸಮಸ್ಯೆಯೇನೂ ಆಗಿಲ್ಲ ಎಂದು ಅವರು ಹೇಳಿದ್ದಾರೆ.