ದೆಹಲಿ, ಫೆ 27 (DaijiworldNews/MS): ಭಾರತೀಯ ಸೇನೆಗೆ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳುವ ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಯನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ.
ಯೋಜನೆಗೆ ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ನ್ಯಾಯಮೂರ್ತಿ ಸುಬ್ರಮಣಿಯನ್ ಪ್ರಸಾದ್ ಅವರನ್ನೊಳಗೊಂಡ ಪೀಠವು, ಸಶಸ್ತ್ರ ಸೇನಾಪಡೆಗಳ ಈ ಅಲ್ಪಾವಧಿಯ ನೇಮಕಾತಿ ಯೋಜನೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿ ಈ ಕುರಿತ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದೆ.
ದೇಶದ ಹಿತದೃಷ್ಟಿ ಮತ್ತು ಸಶಸ್ತ್ರ ಪಡೆಯನ್ನು ಬಲಪಡಿಸುವ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿದೆ ಎಂದು ಕೋರ್ಟ್ ಹೇಳಿದೆ.
ಅಗ್ನಿಪಥ್ ಯೋಜನೆಯನ್ನು 2022ರ ಜೂನ್ 14ರಂದು ಜಾರಿಗೆ ಬಂದಿದೆ. ಯೋಜನೆಯಡಿಯಲ್ಲಿ 17 ಮತ್ತು 21 ವರ್ಷ ವಯೋಮಿತಿಯ ಯುವಜನತೆ 4 ವರ್ಷಗಳ ಅವಧಿಗೆ ನೇಮಕವಾಗಲು ಅರ್ಜಿಸಲ್ಲಿಸಬಹುದು. ಆಯ್ಕೆಯಾದವರನ್ನು ಅಗ್ನಿವೀರರು ಎಂದು ಕರೆಯಲಾಗುತ್ತದೆ.
ಅಗ್ನಿಪಥ್ ವಿರುದ್ಧ ಹಲವಾರು ಅರ್ಜಿಗಳು ಕೋರ್ಟ್ನಲ್ಲಿ ದಾಖಲಾಗಿತ್ತು. ಸುಪ್ರೀಂಕೋರ್ಟ್ ಅವುಗಳನ್ನು ದೆಹಲಿ ಹೈಕೋರ್ಟ್ಗೆ ವರ್ಗಾಯಿಸಿತ್ತು.