ಉತ್ತರ ಪ್ರದೇಶ, ಫೆ. 27 (DaijiworldNews/SM): 2005ರಲ್ಲಿ ಬಿಎಸ್ಪಿ ಶಾಸಕ ರಾಜು ಪಾಲ್ ಹತ್ಯೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಎಂಬಾತನನ್ನು ಫೆಬ್ರವರಿ 24ರಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯೋರ್ವನನ್ನು ಪೊಲೀಸರು ಎನ್ ಕೌಂಟರ್ ಮೂಲಕ ಮುಗಿಸಿದ್ದಾರೆ.
ಪ್ರತ್ಯಕ್ಷದರ್ಶಿ ಉಮೇಶ್ ಪಾಲ್ ಅವರ ಮೇಲೆ ದಾಳಿ ಮಾಡಲು ದಾಳಿಕೋರರು ಬಳಸಿದ ಬಿಳಿ ಬಣ್ಣದ ಎಸ್ಯುವಿ ಕಾರಿನ ಚಾಲಕ ಅರ್ಬಾಜ್ನನ್ನು ಗುಪ್ತಚರ ಮಾಹಿತಿಯ ನಂತರ ಪೊಲೀಸ್ ತಂಡಗಳು ಸುತ್ತುವರೆದಿತ್ತು ಎಂದು ಉಪ ಪೊಲೀಸ್ ಆಯುಕ್ತ ನವೇಂದು ಕುಮಾರ್ ತಿಳಿಸಿದ್ದಾರೆ.
ಧೂಮಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ನೆಹರೂ ಪಾರ್ಕ್ನಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ತನ್ನನ್ನು ಸುತ್ತುವರೆದಿರುವ ಪೊಲೀಸರ ಮೇಲೆ ಅರ್ಬಾಜ್ ಗುಂಡು ಹಾರಿಸಿದ್ದು ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದ್ದು ಈ ವೇಳೆ ಅರ್ಬಾಜ್ ಗಾಯಗೊಂಡಿದ್ದನು. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾಗಿ ಘೋಷಿಸಿದರು ಎಂದು ನವೇಂದು ಕುಮಾರ್ ತಿಳಿಸಿದ್ದಾರೆ.
ಗುಂಡಿನ ದಾಳಿ ವೇಳೆ ಅರ್ಬಾಜ್ ಜೊತೆಗಿದ್ದ ಮೂರ್ನಾಲ್ಕು ಮಂದಿ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ನಾವು ಅವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದರು.