ನವದೆಹಲಿ, ಫೆ 28 (DaijiworldNews/DB): ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ನ ಅಧಿಕೃತ ಟ್ವಿಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದು, ಪ್ರೊಫೈಲ್ ಹೆಸರು ಹಾಗೂ ಚಿತ್ರವನ್ನು ಬದಲಾಯಿಸಿದ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಪಕ್ಷದ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿ ಯುಗಾ ಲ್ಯಾಬ್ಸ್ ಎಂಬುದಾಗಿ ಹೆಸರು ಬದಲಾಯಿಸಲಾಗಿದೆ. ಕ್ರಿಪ್ಟೋ ಕಂಪೆನಿಯ ಹೆಸರಂತೆ ಇದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎನ್ನಲಾಗಿದೆ. ಆದರೆ ಹ್ಯಾಕರ್ಗಳು ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ ಬಳಿಕ ಯಾವುದೇ ಹೊಸ ಟ್ವೀಟ್ಗಳನ್ನು ಪೋಸ್ಟ್ ಮಾಡಲಾಗಿಲ್ಲ. ಟ್ವಿಟರ್ ಖಾತೆ ಹ್ಯಾಕ್ ಆಗಿರುವ ಕುರಿತು ಪಕ್ಷವು ಟ್ವಿಟರ್ ಕಂಪೆನಿಗೆ ಮಾಹಿತಿ ನೀಡಿದ್ದು, ಸರಿಪಡಿಸಲು ಹೇಳಲಾಗಿದೆ ಎಂದು ಟಿಎಂಸಿ ಪ್ರಮುಖರು ತಿಳಿಸಿದ್ದಾರೆ.
ಟಿಎಂಸಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ಗೆ ಹ್ಯಾಕ್ನಿಂದಾಗಿ ತೊಂದರೆಯಾಗಿದ್ದು, ಈ ಸಂಬಂಧ ಟ್ವಿಟರ್ ಸಂಸ್ಥೆಗೆ ಮಾಹಿತಿ ನೀಡಲಾಗಿದೆ. ಸದ್ಯ ಟ್ವಿಟರ್ ಖಾತೆ ಸರಿಪಡಿಸುವ ಕೆಲಸದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಅವರೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದು, ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಟಿಎಂಸಿ ನಾಯಕ ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.