ಹುಬ್ಬಳ್ಳಿ, ಫೆ 28 (DaijiworldNews/MS):ಜೆಪಿ ನಡ್ಡಾ ಹಾಗೂ ಅಮಿತ್ ಶಾ ಅವರು ಬಿಜೆಪಿಗೆ ಏಜೆಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದು, ಹಾಗಾದರೆ ರಾಹುಲ್ ಗಾಂಧಿ ಕೂಡ ಕಾಂಗ್ರೆಸ್ಗೆ ಏಜೆಂಟರ್ ಆಗಿ ಕೆಲಸ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿ, ಈ ರೀತಿಯ ಹೇಳಿಕೆಯಿಂದ ಬಿಜೆಪಿಯವರು ಎಷ್ಟರಮಟ್ಟಿಗೆ ಹತಾಶರಾಗಿದ್ದಾರೆ ಎಂಬುದನ್ನು ನೋಡಬಹುದು. ಮೋದಿ ಅವರು ರಾಜ್ಯಕ್ಕೆ ಬಂದು ಹೋದ ಮೇಲೆ ವ್ಯಕ್ತವಾಗುತ್ತಿರುವ ಜನಬೆಂಬಲ ನೋಡಿ ಆತಂಕದಿಂದ ಈ ರೀತಿ ಹೇಳಿದ್ದಾರೆ. ಒಬ್ಬ ಅನುಭವಿ ಮಾಜಿ ಸಿಎಂ ಇಂಥಹ ಹೇಳಿಕೆ ನೀಡಿರುವುದಕ್ಕೆ ಜನರೇ ಉತ್ತರ ಕೊಡುತ್ತಾರೆ ಎಂದರು.
ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿಗೆ ಇನ್ನು ಕೂಡ ರಾಜಕೀಯದಿಂದ ನಿವೃತ್ತಿಯಾಗುವ ವಯಸ್ಸು ಆಗಿಲ್ಲ. ಹೀಗಾಗಿ, ಅವರು ಇನ್ನೂ ರಾಜ್ಯಕ್ಕೆ ಭಾರೀ ಸೇವೆ ಸಲ್ಲಿಸಬೇಕು ಎಂದು ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿ, ಕುಮಾರಸ್ವಾಮಿ ಯಾವ ಸಂದರ್ಭಕ್ಕೆ ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆಯೋ ಗೊತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಈ ರೀತಿ ಮಾತನಾಡುತ್ತಾರೆ. ಜನತೆ ಬಹಳ ಬಹಳ ಪ್ರಬುದ್ಧರಿದ್ದು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಮತದಾರರ ಪ್ರಬುದ್ಧತೆ ಹೆಚ್ಚಾಗುತ್ತಿದ್ದು, ನಾವು ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕೆಂದು ಮಾರ್ಮಿಕವಾಗಿ ಹೇಳಿದರು.