ನವದೆಹಲಿ, ಫೆ 28 (DaijiworldNews/DB): ದೆಹಲಿಯ ಅಬಕಾರಿ ನೀತಿ ಪ್ರಕರಣ ಸಂಬಂಧ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿರುವ ಬೆನ್ನಲ್ಲೇ ಸಿಸೋಡಿಯಾ ಅವರು ಸಿಬಿಐ ವಿರುದ್ದ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಮನೀಶ್ ಸಿಸೋಡಿಯಾ ಅವರನ್ನು ಮಾರ್ಚ್ 4ರ ತನಕ ಸಿಬಿಐ ವಶಕ್ಕೆ ನೀಡಿ ಸೋಮವಾರ ವಿಶೇಷ ಆದೇಶ ಹೊರಡಿಸಿತ್ತು. ಇದೀಗ ಮಂಗಳವಾರ ಸಿಸೋಡಿಯಾ ಪರ ವಕೀಲರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐ ತಮ್ಮನ್ನು ಬಂಧಿಸಿದ ಕ್ರಮ ಪ್ರಶ್ನಿಸಿ ಸಿಸೋಡಿಯಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಪೀಠದ ಮುಂದೆ ಈ ಅರ್ಜಿಯನ್ನು ತುರ್ತು ವಿಚಾರಣೆ ಮಾಡುವಂತೆ ಕೋರಿಕೆ ಮಂಡಿಸುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.
ದೆಹಲಿ ಹೊಸ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮನೀಶ್ ಸಿಸೋಡಿಯಾ ಪಾತ್ರ ವಹಿಸಿದ್ದು, ಇದರಲ್ಲಿ ಹಗರಣ ನಡೆದಿದೆ. ಹೀಗಾಗಿ ಸಿಸೋಡಿಯಾ ವಿಚಾರಣೆ ನಡೆಸುವ ಅಗತ್ಯವಿರುವ ಹಿನ್ನೆಲೆಯಲ್ಲಿ ಅವರನ್ನು ಸಿಬಿಐ ವಶಕ್ಕೊಪ್ಪಿಸಬೇಕು ಎಂದು ವಿಶೇಷ ನ್ಯಾಯಾಲಯದಲ್ಲಿ ಮನವಿ ಮಾಡಲಾಗಿತ್ತು. ಮನವಿಯನ್ನು ಪುರಸ್ಕರಿಸಿದ ವಿಶೇಷ ನ್ಯಾಯಾಲಯವು ಮಾರ್ಚ್ 4ರ ತನಕ ಅವರನ್ನು ಸಿಬಿಐ ವಶಕ್ಕೊಪ್ಪಿಸಿ ಆದೇಶಿಸಿತ್ತು.