ಶ್ರೀನಗರ, ಫೆ 28 (DaijiworldNews/DB): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಕಾಶ್ಮೀರಿ ಪಂಡಿತನ ಹತ್ಯೆಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಹತನಾಗಿದ್ದಾನೆ.
ಅಕಿಬ್ ಮುಷ್ತಾಕ್ ಭಟ್ ಹತ್ಯೆಯಾದ ಭಯೋತ್ಪಾದಕ. ಪುಲ್ವಾಮಾ ಜಿಲ್ಲೆಯ ಅಚಾನ್ ಪ್ರದೇಶದಲ್ಲಿ ಬ್ಯಾಂಕ್ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾಶ್ಮೀರಿ ಪಂಡಿತ ಸಂಜಯ್ ಶರ್ಮಾ ಅವರನ್ನು ಕಳೆದ ಭಾನುವಾರ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಈ ಹತ್ಯಾ ಪ್ರಕರಣದಲ್ಲಿ ಅಕಿಬ್ ಕೂಡಾ ಭಾಗಿಯಾಗಿದ್ದ. ಎಚ್ಎಂ ಭಯೋತ್ಪಾದಕ ಸಂಘಟನೆಯಲ್ಲಿ ಆರಂಭದಲ್ಲಿ ಗುರುತಿಸಿಕೊಂಡಿದ್ದ ಈತ ಪ್ರಸ್ತುತ ಟಿಆರ್ಎಫ್ ಸಂಘಟನೆಯೊಂದಿಗೆ ಸಕ್ರಿಯನಾಗಿದ್ದಾನೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಆವಂತಿಪೋರಾದಲ್ಲಿ ಇಬ್ಬರು ಭಯೋತ್ಪಾದಕರು ಅಡಗಿ ಕುಳಿತಿರುವ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಮುಂಜಾನೆ 1:30ಕ್ಕೆ ಭದ್ರತಾ ಪಡೆಗಳು ಎನ್ಕೌಂಟರ್ ಆರಂಭಿಸಿದರು. ಈ ಎನ್ಕೌಂಟರ್ನಲ್ಲಿ ಭಯೋತ್ಪಾದಕನನ್ನು ಹೊಡೆದುರುಳಿಸಲಾಯಿತು.