ಹುಬ್ಬಳ್ಳಿ, ಫೆ 28 (DaijiworldNews/DB): ಸರಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಸಂಬಂಧ ಮಧ್ಯಂತರ ವರದಿ ಬಂದ ಕೂಡಲೇ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, 7 ನೇ ವೇತನ ಆಯೋಗದ ವರದಿ ಅನುಷ್ಠಾನಕ್ಕಾಗಿ ಈಗಾಗಲೇ ಹಣ ಕಾಯ್ದಿರಿಸಲಾಗಿದೆ. ಈ ಸಂಬಂಧ ಮಧ್ಯಂತರ ವರದಿ ಸಿದ್ದಪಡಿಸುವ ಪ್ರಕ್ರಿಯೆ ನಡೆಯತ್ತಿದೆ. 2023-24 ನೇ ಸಾಲಿನಲ್ಲೇ ಅದನ್ನು ಜಾರಿ ಮಾಡಲಾಗುವುದು. ನೌಕರರ ಸಂಘದ ಪದಾಧಿಕಾರಿಗಳು ಮತ್ತು ಅಧಿಕಾರಿಗಳ ನಡುವೆ ಈ ಸಂಬಂಧ ಮಾತುಕತೆಗಳು ನಡೆಯುತ್ತಿದೆ. ನೌಕರರ ಬೇಡಿಕೆ ಈಡೇರಿಕೆಗೆ ಸರ್ಕಾರ ಸದಾ ಸಿದ್ದವಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತಾ ಶಾ ಸೇರಿದಂತೆ ರಾಷ್ಟ್ರದ ವಿವಿಧ ನಾಯಕರು ರಾಜ್ಯಕ್ಕೆ ಆಗಮಿಸುತ್ತಿರುವುದನ್ನು ನೋಡಿ ಕಾಂಗ್ರೆಸ್ ನಾಯಕರು ಭ್ರಮನಿರಸನಗೊಂಡಿದ್ದಾರೆ. ಅದಕ್ಕಾಗಿಯೇ ಇಲ್ಲಸಲ್ಲದ ಹೇಳಿಕೆ ನೀಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕುಟುಕಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿರುವುದು ಯಾವ ಸಂದರ್ಭದಲ್ಲಿ ಎಂಬುದು ನನಗೆ ಗೊತ್ತಿಲ್ಲ. ನಿವೃತ್ತಿಯಾಗುವ ವಯಸ್ಸು ಕೂಡಾ ಅವರದಲ್ಲ. ಜನ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇವೆಲ್ಲಾ ಚುನಾವಣೆ ಸಂದರ್ಭದಲ್ಲಿ ಸಾಮಾನ್ಯ ಎಂಬುದು ಜನರಿಗೂ ಗೊತ್ತಿದೆ. ಯಾವುದೇ ಮಾತುಗಳನ್ನಾಡುವಾಗಲೂ ಸರಿಯಾಗಿ ಯೋಚಿಸಿ ಮಾತನಾಡಬೇಕು ಎಂದು ಇದೇ ವೇಳೆ ಸಿಎಂ ಬೊಮ್ಮಾಯಿ ಸಲಹೆ ಮಾಡಿದರು.
ಗೋ ಬ್ಯಾಕ್ ಅಭಿಯಾನ ಈಗ ಸಾಮಾನ್ಯವಾಗಿದೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಬನವಾಸಿಯಲ್ಲಿನ ಸಿಎಂ ಗೋ ಬ್ಯಾಕ್ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.