ನವದೆಹಲಿ, ಫೆ 28 (DaijiworldNews/DB): ತಂತ್ರಜ್ಞಾನಗಳ ಸಹಾಯದಿಂದ 2047ರ ವೇಳೆಗೆ ಭಾರತ ಅಭಿವೃದ್ದಿ ಹೊಂದಿದ ದೇಶವಾಗಿ ರೂಪು ತಳೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಾಮಾನ್ಯ ಬಜೆಟ್ ನಂತರ ಆಯೋಜಿಸಲಾಗುತ್ತಿರುವ ವೆಬ್ನಾರ್ಗಳ ಸರಣಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಆಧುನಿಕ ಡಿಜಿಟಲ್ ಮೂಲ ಸೌಕರ್ಯ ಭಾರತದಲ್ಲಿ ಹೆಚ್ಚುತ್ತಿದೆ. ಡಿಜಿಟಲ್ ಕ್ರಾಂತಿಯಿಂದಾಗಿ ದೇಶದಲ್ಲಿ ಹಲವು ರೀತಿಯ ಪ್ರಯೋಜನಗಳಾಗುತ್ತಿವೆ. ಆ ಮೂಲಕ 2047ರ ವೇಳೆಗೆ ದೇಶವು ಅಭಿವೃದ್ದಿ ಹೊಂದಿದ ದೇಶವಾಗಲು ತಂತ್ರಜ್ಞಾನ ಕ್ಷೇತ್ರವು ಸಾಕಷ್ಟು ಕೊಡುಗೆ ನೀಡಲಿದೆ ಎಂದು ಪ್ರತಿಪಾದಿಸಿದರು.
ತೆರಿಗೆದಾರರ ಸಮಸ್ಯೆ ಪರಿಹಾರಕ್ಕೆ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಮುಖರಹಿತ ತೆರಿಗೆ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ ಎಂದರು.
ಒಂದು ರಾಷ್ಟ್ರ, ಒಂದು ಪಡಿತರ ಯೋಜನೆ ಕಾರ್ಯರೂಪಕ್ಕೆ ಬಂದು ಯಶಸ್ವಿಯಾಗಲು ತಂತ್ರಜ್ಞಾನ ನೆರವು ನೀಡಿದೆ. ಬಡವರಿಗೆ ಜನ್ ಧನ್ ಯೋಜನೆ, ಆಧಾರ, ಮೊಬೈಲ್ ಸಂಖ್ಯೆಯಂತಹ ಜೆಎಎಂ ಟ್ರೈಲಾಜಿಗಳು ಮುಟ್ಟಲು ಇದೇ ತಂತ್ರಜ್ಞಾನಗಳು ಪೂರಕವಾಗಿ ಕೆಲಸ ಮಾಡಿವೆ. 5ಜಿ ಮತ್ತು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಬಗೆಗೂ ಚರ್ಚೆ ನಡೆಯುತ್ತಿದೆ. ವೈದ್ಯಕೀಯ, ಶಿಕ್ಷಣ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳನ್ನು ಪರಿವರ್ತಿಸಲು ನಿರ್ಧಾರ ಮಾಡಲಾಗಿದೆ ಎಂದವರು ತಿಳಿಸಿದರು.