ನವದೆಹಲಿ, ಫೆ 28 (DaijiworldNews/DB): ಐಟಿ ಕಂಪೆನಿಗಳಲ್ಲಿ ಉದ್ಯೋಗಿಗಳ ವಜಾ ಪ್ರಕ್ರಿಯೆ ಮುಂದುವರಿದಿದ್ದು, ತಂತ್ರಜ್ಞಾನ ದೈತ್ಯ ಸಂಸ್ಥೆ ಗೂಗಲ್ ಭಾರತದಲ್ಲಿ ಸುಮಾರು 450 ಮಂದಿಯನ್ನು ವಜಾಗೊಳಿಸಿದೆ. ದುರಾದೃಷ್ಟವೆಂದರೆ ತಿಂಗಳ ತಾರಾ ಸಾಧಕನೆಂದು ಪ್ರಶಸ್ತಿ ಪಡೆದ ಉದ್ಯೋಗಿಯನ್ನೂ ಗೂಗಲ್ ಕೆಲಸದಿಂದ ತೆಗೆದು ಹಾಕಿದೆ.
ಹೈದರಾಬಾದ್ ಮೂಲದ ಡಿಜಿಟಲ್ ಮಾಧ್ಯಮದ ಹಿರಿಯ ಸಹಾಯಕನೊಬ್ಬ ತಿಂಗಳ ತಾರಾ ಸಾಧಕ ಪ್ರಶಸ್ತಿಯನ್ನು ಗೂಗಲ್ನಿಂದ ಪಡೆದಿದ್ದ. ಆದರೆ ಶನಿವಾರ ಈತನ ಮೊಬೈಲ್ಗೆ ಪಾಪ್ ಅಪ್ ಮೇಲ್ ಬಂದಿದ್ದು, ಉದ್ಯೋಗ ಕಡಿತದ ಭಾಗವಾಗಿ ಆತನನ್ನೂ ತೆಗೆದು ಹಾಕಿರುವ ಬಗ್ಗೆ ಮಾಹಿತಿ ನೀಡಿತ್ತು. ಇದರಿಂದ ಆ ಉದ್ಯೋಗಿ ಆಘಾತಕ್ಕೊಳಗಾಗಿದ್ದಾರೆ. ತಿಂಗಳ ತಾರಾ ಸಾಧಕನಾಗಿದ್ದರೂ ನನ್ನನ್ನು ಗೂಗಲ್ನಿಂದ ಯಾಕೆ ವಜಾ ಮಾಡಲಾಗಿದೆ ಮತ್ತು ನನ್ನನ್ನೇ ಯಾಕೆ ಎಂಬುದಾಗಿ ಲಿಂಕ್ಡಿನ್ನಲ್ಲಿ ಆ ಉದ್ಯೊಗಿ ಅಳಲು ತೋಡಿಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಎರಡು ತಿಂಗಳ ಕಾಲ ಕೇವಲ ಅರ್ಧ ಸಂಬಳ ನೀಡಲಾಯಿತು. ಈಗ ನನ್ನ ಹಣಕಾಸು ಯೋಜನೆಗಳೆಲ್ಲಾ ನಾಶವಾಗಿವೆ. ಕೆಲಸ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಅನಿವಾರ್ಯತೆಯಲ್ಲಿ ನಾನಿದ್ದೇನೆ ಎಂದು ಆತ ಬರೆದುಕೊಂಡಿದ್ದಾನೆ.