ಮೈಸೂರು, ಫೆ 28 (DaijiworldNews/DB): ಅನಾರೋಗ್ಯದ ಕಾರಣದಿಂದಾಗಿ ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರು ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ.
ನನ್ನ ಮೇಲೆ ಹಲ್ಲೆ ನಡೆದ ಬಳಿಕ ಆರೋಗ್ಯದಲ್ಲಿ ತುಂಬಾ ವ್ಯತ್ಯಯ ಉಂಟಾಗಿದೆ. ಮಾನಸಿಕ ಹಾಗೂ ದೈಹಿಕವಾಗಿ ನಾನು ಸಾಕಷ್ಟು ಶಕ್ತಿ ಹೊಂದಿಲ್ಲ. ಹೀಗಾಗಿ ರಾಜಕಾರಣದಿಂದ ನಿವೃತ್ತಿ ಪಡೆಯುತ್ತಿದ್ದೇನೆ. ಆದರೆ ಕಾಂಗ್ರೆಸ್ನಲ್ಲೇ ಇರುವುದಾಗಿ ಅವರು ಎಐಸಿಸಿಗೆ ಪತ್ರ ಬರೆದಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅನಾರೋಗ್ಯ ಅಡ್ಡಿಯಾಗುತ್ತಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಬೇಡ. ಮುಂದೆಯೂ ಯಾವುದೇ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.
ಇನ್ನು ಎಐಸಿಸಿಗೆ ಈ ಪತ್ರವನ್ನು ತನ್ವೀರ್ ಸೇಠ್ ಅವರು ಕಳೆದ ಡಿಸೆಂಬರ್ ತಿಂಗಳಲ್ಲೇ ಬರೆದಿದ್ದಾರೆ. ಆದರೆ ಈಗ ಅದು ಬಹಿರಂಗಗೊಂಡಿದೆ ಎನ್ನಲಾಗುತ್ತಿದೆ. ತನ್ವೀರ್ ಸೇಠ್ ನಿವೃತ್ತಿ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಅವರ ಅಭಿಮಾನಿಗಳು ಮನೆ ಮುಂಭಾಗ ಜಮಾಯಿಸಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಒತ್ತಾಯಿಸಿದ್ದಾರೆ.
ತನ್ವೀರ್ ಸೇಠ್ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಸುದ್ದಿ ತಿಳಿದ ಅಭಿಮಾನಿಯೊಬ್ಬ ಆತ್ಮಹತ್ಯೆಗೂ ಮುಂದಾಗಿದ್ದಾನೆ. ರಸುಲ್ ಎಂಬಾತ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಕೂಡಲೇ ಉದಯಗಿರಿ ಪೊಲೀಸರು ಬಾಟಲಿ ಕಿತ್ತೆಸೆದಿದ್ದಾರೆ. ಇತರರು ನೀರು ಸುರಿದು ಬೆಂಕಿ ತಗುಲದಂತೆ ನೋಡಿಕೊಂಡರು.
2019ರ ನವೆಂಬರ್ 17ರ ರಾತ್ರಿ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.