ಬೆಂಗಳೂರು, ಫೆ 28 (DaijiworldNews/MS):ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು, ಗೃಹ ಸಚಿವರು ಪದೇ ಪದೆ ಅವರು ರಾಜ್ಯಕ್ಕೆ ಆಗಮಿಸುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಅವರಿಗೆ ರಾಜ್ಯದ ಮೇಲೆ ಪ್ರೀತಿ ಹೆಚ್ಚಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಎಂಎಲ್ಸಿ ರಮೇಶ್ ಬಾಬು ನೇತೃತ್ವದಲ್ಲಿ ನಡೆದ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಿಜೆಪಿ ಸಮಾವೇಶಗಳಲ್ಲಿ ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ ಅವರ ಹೆಸರು ಪ್ರಸ್ತಾಪವನ್ನೇ ಮಾಡುತ್ತಿಲ್ಲ. ಶಿವಮೊಗ್ಗದ ಕಾರ್ಯಕ್ರಮದಲ್ಲಿ ಅವರು ಮುಖ್ಯಮಂತ್ರಿಗಳ ಹೆಸರೂ ತೆಗೆದುಕೊಳ್ಳಲಿಲ್ಲ. ಒರ್ವ ಮುಖ್ಯಮಂತ್ರಿಗಳ ಬಗ್ಗೆ ಅವರಿಗೆ ಇಷ್ಟೋಂದು ಸಿಟ್ಟು ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಈ ಸರ್ಕಾರ 40% ಸರ್ಕಾರ, ಹೀಗಾಗಿ ನಾವು ಇವರ ಹೆಸರು ತೆಗೆದುಕೊಂಡರೆ ಜನ ನಮಗೆ ಮತ ಹಾಕುವುದಿಲ್ಲ ಎಂದು ರಾಜ್ಯ ನಾಯಕರ ಹೆಸರು ಹೇಳುತ್ತಿಲ್ಲ.
ಸಂಡೂರಿನಲ್ಲಿ ಅಮಿತ್ ಶಾ ಅವರು ಮೋದಿ ಅವರ ಮುಖ ನೋಡಿ ಮತ ನೀಡಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದಿದ್ದಾರೆ. ಇಲ್ಲಿ ಸದನದಲ್ಲಿ ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಾರೆ. ಇಲ್ಲಿ ರಾಜ್ಯ ನಾಯಕರು ಜನರ ವಿಶ್ವಾಸ ಇಟ್ಟುಕೊಂಡಿಲ್ಲ. ಈ ಸರ್ಕಾರ 40% ಸರ್ಕಾರ, ಪೇಸಿಎಂ ಎಂದು ದೇಶದಲ್ಲಿ ಕುಖ್ಯಾತಿ ಪಡೆದಿದ್ದಾರೆ. ಹೀಗಾಗಿ ಮೋದಿ ಮುಖ ನೋಡಿ ಮತ ನೀಡಿ ಎಂದು ಹೇಳುತ್ತಿದ್ದಾರೆ.
ಸರ್ಕಾರ ನಮಗೆ ದಿನಕ್ಕೊಂದು ಹಗರಣ ನೀಡುತ್ತಿದ್ದಾರೆ. ನಾವು ದಾಖಲೆ ಸಮೇತ ಮಾತನಾಡಿದರೆ ನಮ್ಮ ವಿರುದ್ಧ ಸಿಐಡಿ ನೋಟೀಸ್ ನೀಡುತ್ತಾರೆ. ಇವರು ಯಾವುದನ್ನೂ ಬಿಡದ ರೀತಿಯಲ್ಲಿ ಲೂಟಿ ಮಾಡುತ್ತಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಕಾಕಂಬಿಯಲ್ಲೂ ಹಗರಣ ಮಾಡುತ್ತಿದ್ದಾರೆ. ಪಠ್ಯಪುಸ್ತಕ, ಶಾಲಾ ಬ್ಯಾಗ್, ಶೂ ಯಾವುದನ್ನು ಬಿಡುತ್ತಿಲ್ಲ. ಎಲ್ಲದರಲ್ಲೂ ಹಗರಣ.
ಮುಂಬೈ ಮೂಲದ ಕೆ.ಎನ್ ರಿಸೋರ್ಸಸ್ ಎಂಬ ಖಾಸಗಿ ಕಂಪನಿ ಇದೆ. ಇವರು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ 2 ಲಕ್ಷ ಮೆ.ಟನ್ ರಫ್ತಿಗೆ ಅನುಮತಿ ಕೇಳುತ್ತಾರೆ. ಅವರ ಬಳಿ ಯಾವುದೇ ದಾಖಲೆ ಇಲ್ಲದಿದ್ದರೂ ಸರ್ಕಾರ ವಿಶೇಷ ಪ್ರೀತಿಯಿಂದ ಎಂ1 ಎಂ2 ಪರವಾನಿಗೆ ಕೊಡಿಸುತ್ತಾರೆ. ಕೇವಲ 2 ತಿಂಗಳಲ್ಲಿ 0 ದಾಖಲೆ ಇದ್ದರೂ ಪರವಾನಿಗೆ ನೀಡುತ್ತಿದ್ದಾರ. ಇದರ ವಿರುದ್ಧ ಸ್ಟೇಟ್ ಡಿಸ್ಟಿಲರಿ ಏನರ್ಸ್ ಅಸೋಸಿಯೇಷನ್ ಅವರು ಪ್ರತಿಭಟನೆ ಮಾಡುತ್ತಾರೆ. ಕಾಕಂಬಿ ನಮಗೆ ಸಾಲುತ್ತಿಲ್ಲ. ರಫ್ತು ಮಾಡಿದರೆ ನಮಗೆ ಸಮಸ್ಯೆಯಾಗುತ್ತದೆ ಎಂದು ಅವರು ವಾದಿಸುತ್ತಿದ್ದಾರೆ.
ರಾಜ್ಯ ಬಜೆಟ್ ನಲ್ಲಿ ಅಬಕಾರಿಯಿಂದ 39 ಸಾವಿರ ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಇಟ್ಟಿದ್ದು, ಇತ್ತ ಕಾಕಂಬಿ ಅಲ್ಲದಂತೆ ಮಾಡುತ್ತಿದ್ದಾರೆ. ಯಾರ ಲಾಭಕ್ಕೆ ಈ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ? ಇವರಿಗೆ ರಫ್ತಿಗೆ ಅನುಮತಿ ನೀಡಬೇಡಿ, ಸರ್ಕಾರದ ಆದಾಯಕ್ಕೆ ತೊಂದರೆಯಾಗುತ್ತದೆ ಎಂದು ಪ್ರತಿಭಟನೆ ಮಾಡಿದರೂ ಕಿಂಚಿತ್ತೂ ಬೆಲೆ ನೀಡಲಿಲ್ಲ. ಈ ಕಂಪನಿ ಕಳೆದ 3 ವರ್ಷಗಳಿಂದ ಜಿಎಸ್ಟಿ ಪಾವತಿಸಿಲ್ಲ. ಆದರೂ ಅನುಮತಿ ನೀಡುತ್ತಾರೆ. ಅನುಮತಿ ಕೇಳುವಾಗ ಈ ಹಿಂದೆ ರಫ್ತು, ಕಾಕಂಬಿ ರಫ್ತಿಗೆ ವ್ಯವಸ್ಥೆ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ. ವಿಶೇಷವಾಗಿ ಇವರು ಎಲ್ಲಿಗೆ ರಫ್ತು ಮಾಡುತ್ತೇವೆ ಎಂದು ತಿಳಿಸಿಯೂ ಇಲ್ಲ. ಆದರೂ ಅನುಮತಿ ನೀಡಿರುವುದು ಹೇಗೆ? ಎಂದು ಪ್ರಶ್ನಿಸಿದರು.
ಈ ಸರ್ಕಾರದಲ್ಲಿ ದಾಖಲೆ ಇಲ್ಲದಿದ್ದರೂ 40% ಕಮಿಷನ್ ನೀಡಿದರೂ ವ್ಯವಹಾರ ಮಾಡಬಹುದು ಎಂದು ಹೇಳುತ್ತಾರೆ. ಹಣಕಾಸು ಸಚಿವರು ಶಿಫಾರಸ್ಸು ಪತ್ರ ನೀಡಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಎರಡು ಬಾರಿ ಇವರನ್ನು ಆಯ್ಕೆ ಮಾಡಿ ಸಚಿವರನ್ನಾಗಿ ಮಾಡಿದ್ದಾರೆ. ಅವರಿಂದ ರಾಜ್ಯಕ್ಕೆ ಏನು ಸಿಕ್ಕಿದೆ? 15ನೇ ಹಣಕಾಸು ಆಯೋಗದ ಶಿಫಾರಸ್ಸಿನಲ್ಲಿ ಅನ್ಯಾಯ, ಅತಿವೃಷ್ಟಿ ಪರಿಹಾರದಲ್ಲಿ ಅನ್ಯಾಯ, ಬರ ಬಂದಾಗಲೂ ಅನ್ಯಾಯ, ಬಂಡವಾಳಗಳು ಗುಜರಾತ್ ಕಡೆ ಹೋಗುತ್ತಿದ್ದಾರೆ. ಇವರನ್ನು ರಾಜ್ಯದಿಂದ ಆಯ್ಕೆ ಮಾಡಿ ಏನು ಪ್ರಯೋಜನ? ಬಿಜೆಪಿಯವರು ಮಾತೆತ್ತಿದರೆ ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. ಇದು ರಾಜ್ಯಕ್ಕೆ ಟ್ರಬಲ್ ಇಂಜಿನ್ ಸರ್ಕಾರವಾಗಿದೆ ಎಂದು ಆರೋಪಿಸಿದರು.