ಬೆಂಗಳೂರು, ಫೆ 28 (DaijiworldNews/DB): ಕರ್ನಾಟಕ ವಿಧಾನಸಭಾ ಚುನಾವಣೆ ಸನಿಹದಲ್ಲಿರುವಾಗಲೇ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಅವರು ಬಿಜೆಪಿ ಮುಖಂಡರನ್ನು ಭೇಟಿ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಎಎಪಿಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಭಾಸ್ಕರ್ ರಾವ್ ಅವರು ಮಂಗಳವಾರ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಪದ್ಮನಾಭನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಅಶೋಕ್ ಭೇಟಿಗೂ ಮುನ್ನ ಬಿಜೆಪಿಯ ರಾಜ್ಯ ಕಚೇರಿಗೂ ಭಾಸ್ಕರ ರಾವ್ ಭೇಟಿ ನೀಡಿದ್ದಾರೆ. ಅಲ್ಲದೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಅವರನ್ನೂ ಭಾಸ್ಕರ್ ರಾವ್ ಭೇಟಿಯಾಗಿದ್ದಾರೆ.
ಸದ್ಯ ಬಿಜೆಪಿಯ ಭದ್ರಕೋಟೆಯಾಗಿರುವ ಬಸವನಗುಡಿ ಕ್ಷೇತ್ರದಿಂದ ಎಎಪಿಯಿಂದ ಕಣಕ್ಕಿಳಿಯಲು ಭಾಸ್ಕರ್ ರಾವ್ ನಿರ್ಧರಿಸಿದ್ದಾರೆ. ಇದಕ್ಕಾಗಿ ಕ್ಷೇತ್ರ ಪ್ರವಾಸವೂ ಆರಂಭವಾಗಿದೆ. ಆದರೆ ಇದೆಲ್ಲದರ ನಡುವೆ ಅವರು ಬಿಜೆಪಿ ಮುಖಂಡರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಎಡಿಜಿಪಿಯಾಗಿದ್ದ ಭಾಸ್ಜರ್ ರಾವ್ ನಿವೃತ್ತಿಗೂ ಮೂರು ವರ್ಷ ಮೊದಲೇ ಸ್ವಯಂ ನಿವೃತ್ತಿ ಪಡೆದು ಎಎಪಿ ಸೇರ್ಪಡೆ ಮೂಲಕ ರಾಜಕೀಯಕ್ಕೆ ಎಂಟ್ರಿ ಪಡೆದಿದ್ದರು. ಆಡಳಿತ ಪಕ್ಷ ಬಿಜೆಪಿಯನ್ನು ಹಲವು ಬಾರಿ ಟೀಕಿಸಿದ್ದರು.