ನವದೆಹಲಿ, ಫೆ 28 (DaijiworldNews/DB): ಮದ್ಯ ನೀತಿ ಹಗರಣ ಸಂಬಂಧಿಸಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿರುವ ಸಿಬಿಐ ವಿರುದ್ದ ಆಮ್ ಆದ್ಮಿ ಪಕ್ಷವು ವಾಗ್ದಾಳಿ ಮುಂದುವರಿಸಿದೆ. ಇದೇ ವೇಳೆ ಬಿಜೆಪಿಯ ವಾಷಿಂಗ್ ಮೆಶಿನ್ ಸೇವೆಯ ಸಂತೃಪ್ತ ಗ್ರಾಹಕರ ಪಟ್ಟಿಯನ್ನು ಟ್ವಿಟರ್ನಲ್ಲಿ ಪ್ರಕಟಿಸಿ ಬಿಜೆಪಿಯನ್ನು ಕುಟುಕಿದೆ.
ಬಿಜೆಪಿಯ ವಾಷಿಂಗ್ ಮೆಶಿನ್ ಸೇವೆಯ ಸಂತೃಪ್ತ ಗ್ರಾಹಕರು ಎಂಬುದಾಗಿ ಹಲವು ನಾಯಕರನ್ನು ಹೆಸರಿಸಿ ಆಮ್ ಆದ್ಮಿ ಪಕ್ಷವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಬರೆದುಕೊಂಡಿದೆ. ಇದರಲ್ಲಿ ವಿವಿಧ ಹಗರಣಗಳಲ್ಲಿ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದವರು ಬಿಜೆಪಿ ಸೇರ್ಪಡೆಯಾದ ಕೂಡಲೇ ಅವರಿಗೆ ಕ್ಲೀನ್ಚಿಟ್ ಸಿಗುತ್ತದೆ ಎಂದೂ ಬರೆದುಕೊಂಡಿದೆ. ನಾಯಕರ ಹೆಸರು, ಅವರ ಮೇಲಿದ್ದ ಆರೋಪಗಳು ಮತ್ತು ಬಿಜೆಪಿ ಸೇರ್ಪಡೆಯಾದ ತತ್ಕ್ಷಣ ಅವರು ಆರೋಪಮುಕ್ತರಾಗಿರುವ ಬಗ್ಗೆಯೂ ಎಎಪಿ ಬರೆದುಕೊಂಡಿದೆ.
ಕೇಂದ್ರ ಸಚಿವ ನಾರಾಯಣ ರಾಣೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, ಬಂಗಾಳದ ವಿರೋಧ ಪಕ್ಷ ನಾಯಕ ಸುವೇಂದು ಅಧಿಕಾರಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಭಾವನಾ ಗಾವ್ಲಿ, ಯಶ್ವಂತ್ ಜಾಧವ್, ಯಾಮಿನಿ ಜಾಧವ್, ಪ್ರತಾಪ್ ಸರ್ನಾಯಕ್ ಮುಂತಾದ ನಾಯಕರನ್ನು ಪಟ್ಟಿ ಮಾಡಿದೆ.
ಮದ್ಯ ನೀತಿ ಹಗರಣ ಸಂಬಂಧಿಸಿ ಭಾನುವಾರ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೆ ಅವರನ್ನು ರೋಸ್ ಅವೆನ್ಯೂ ನ್ಯಾಯಾಲಯವು ಮಾರ್ಚ್ 4ರ ತನಕ ಸಿಬಿಐ ಕಸ್ಟಡಿಗೆ ವಹಿಸಿದೆ. ಈ ಮಧ್ಯೆ ತಮ್ಮ ಬಂಧನದ ಕ್ರಮ ಪ್ರಶ್ನಿಸಿ ಸಿಬಿಐ ವಿರುದ್ದ ಸಿಸೋಡಿಯಾ ಅವರು ಮಂಗಳವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.