ನವದೆಹಲಿ, ಫೆ 28 (DaijiworldNews/DB): ಅಬಕಾರಿ ನೀತಿ ಹಗರಣ ಪ್ರಕರಣ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿರುವ ಮನೀಶ್ ಸಿಸೋಡಿಯಾ ಹಾಗೂ ಈ ಹಿಂದೆಯೇ ಬಂಧಿಸಲ್ಪಟ್ಟಿರುವ ಸತ್ಯೇಂದರ್ ಜೈನ್ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ದೆಹಲಿ ಉಪ ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನಕ್ಕೆ ಮನೀಶ್ ಸಿಸೋಡಿಯಾ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ಇದೇ ವೇಳೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈ ಹಿಂದೆ ಬಂಧಿಸಲ್ಪಟ್ಟಿರುವ ಸತ್ಯೇಂದರ್ ಜೈನ್ ಅವರು ಕೂಡಾ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಬ್ಬರೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದು, ಸಿಎಂ ಅವರು ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ.
ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣ ಸಂಬಂಧಿಸಿ ಭಾನುವಾರ ಸಿಬಿಐ ಅಧಿಕಾರಿಗಳು ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದ್ದರು. ಸೋಮವಾರ ನ್ಯಾಯಾಲಯವು ಅವರನ್ನು ಮಾರ್ಚ್ 4ರ ತನಕ ಸಿಬಿಐ ಕಸ್ಟಡಿಗೆ ನೀಡಿ ಆದೇಶಿಸಿತ್ತು. ತಮ್ಮನ್ನು ಬಂಧಿಸಿರುವ ಸಿಬಿಐ ವಿರುದ್ದ ಮನೀಶ್ ಸಿಸೋಡಿಯಾ ಅವರು ಮಂಗಳವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.