ಬೆಂಗಳೂರು, ಫೆ 28 (DaijiworldNews/SM): ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೆಚ್ ಡಿಡಿ ಅವರು ಬೆಳಗ್ಗೆ 10.30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು, ಕಾಲುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವೇಗೌಡರು ಆಸ್ಪತ್ರೆಗೆ ತೆರಳುವ ಬಗ್ಗೆ ಬೆಳಿಗ್ಗೆ ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಮಾಹಿತಿ ನೀಡಿದ್ದರು. ದೇವೇಗೌಡರು ಇಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ಆಸ್ಪತ್ರೆಯಿಂದ ಬಂದ ಬಳಿಕ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ನೀಡಿಕೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಇದೀಗ ದೇವೇಗೌಡರು ಆಸ್ಪತ್ರೆಗೆ ದಾಖಲಾಗಿರುವುದು ತಿಳಿದುಬಂದಿದೆ. ದೇವೇಗೌಡರ ಆರೋಗ್ಯ ಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ ಎಂದು ಎರಡು ದಿನಗಳ ಹಿಂದೆಯೇ ಕುಮಾರಸ್ವಾಮಿ ತಿಳಿಸಿದ್ದರು. ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ ಬಗ್ಗೆ ದೇವೇಗೌಡರ ಸಮ್ಮುಖದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ಈ ವಿಚಾರವಾಗಿ ದೇವೇಗೌಡರಿಗೆ ಹೆಚ್ಚಿನ ಹೊರೆ ನೀಡುವುದು ತನಗಿಷ್ಟವಿಲ್ಲ. ದೇವೇಗೌಡರ ಆರೋಗ್ಯವೇ ಮುಖ್ಯ ಎಂದು ಕುಮಾರಸ್ವಾಮಿ ಹೇಳಿದ್ದರು.
ದೇವೇಗೌಡರಿಗೆ ಕಾಲು, ಮಂಡಿ ನೋವಿದೆ. ಮನೆಯಲ್ಲಿ ವಿಶ್ರಾಂತಿ ದೊರೆಯುತ್ತಿಲ್ಲ. ಅವರು ಪ್ರವಾಸಕ್ಕೆ ಹೋಗಲೇಬೇಕೆಂದು ಹೇಳುತ್ತಿದ್ದಾರೆ. ಅವರನ್ನು ಕಾಣಲು ಜನ ಬರುವುದು ಜಾಸ್ತಿ ಆಗಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಇದ್ದರೆ ಒಳ್ಳೆಯದು, ಸ್ಪಂದಿಸಬಹುದು ಎಂದು ದಾಖಲಿಸಲಾಗಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ