ಬೆಂಗಳೂರು, ಮಾ 01 (DaijiworldNews/MS): ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಪಕ್ಷ ತೊರೆದು ಬುಧವಾರ ಭಾರತೀಯ ಜನತಾ ಪಕ್ಷಕ್ಕೆ ಬುಧವಾರ ಸೇರ್ಪಡೆಗೊಂಡಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿದರು.
ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಪೊಲೀಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಭಾಸ್ಕರ್ ರಾವ್, ಪೃಥ್ವಿ ರೆಡ್ಡಿ ಆಪ್ ರಾಜ್ಯಾಧ್ಯಕ್ಷರಾಗಿ ಮುಂದುವರಿದ ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದರು.
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಬಾಸ್ಕರ್ ರಾವ್, ನಾನು ಬಿಜೆಪಿಗೆ ಹೆಚ್ಚಿನ ಕೊಡುಗೆ ನೀಡಬಹುದು ಎಂದು ಭಾವಿಸುತ್ತೇನೆ. ಬಿಜೆಪಿಯು ದೇಶವ್ಯಾಪಿ ಸಂಘಟನೆ ಹೊಂದಿರುವ ಪಕ್ಷ. ಪ್ರಧಾನಿ ಮೋದಿಯವರ ದೂರದೃಷ್ಟಿ ನನ್ನನ್ನು ಪಕ್ಷಕ್ಕೆ ಸೇರಲು ಪ್ರೇರಣೆ ನೀಡಿತು. ಆಪ್ ದೊಡ್ಡದಾಗಿ ಬೆಳೆಯಲ್ಲ. ಅವರು ಒಂದು ಕೂಟದ ಕೈಯಲ್ಲಿದ್ದಾರೆ, ಅವರ ಇಬ್ಬರು ಮಂತ್ರಿಗಳು ಜೈಲಿನಲ್ಲಿರುವುದು ನಾಚಿಕೆಗೇಡಿನ ಸಂಗತಿ. ಪಕ್ಷದಲ್ಲಿ ಸ್ಪಷ್ಟತೆ ಇಲ್ಲ ಎಂದು ದೂರಿದರು.
ರಾಜ್ಯ ಚುನಾವಣ ಸಹ ಉಸ್ತುವಾರಿ, ನಿವೃತ್ತ ಐಪಿಎಸ್ ಕೆ. ಅಣ್ಣಾಮಲೈ ಅವರು ಭಾಸ್ಕರ್ ರಾವ್ ಬಿಜೆಪಿ ಸೇರ್ಪಡೆ ಹಿಂದೆ ಮಹತ್ವದ ಪಾತ್ರ ವಹಿಸಿದ್ದಾರೆಂದು ಹೇಳಲಾಗಿದೆ.
ಬಿಜೆಪಿ ಸೇರ್ಪಡೆಗೆ ಮುನ್ನ ಬಾಸ್ಕರ್ ರಾವ್ ಅವರು ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಪದ್ಮನಾಭನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು. ಒಟ್ಟಾರೆ ಬಾಸ್ಕರ್ ರಾವ್ ಯಾವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.