ನವದೆಹಲಿ, ಮಾ 01 (DaijiworldNews/MS): ಮನೀಷ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ರಾಜೀನಾಮೆಯಿಂದ ತೆರವಾಗಿದ್ದ ದೆಹಲಿ ಸಚಿವ ಸಂಪುಟದ ಎರಡು ಸ್ಥಾನಗಳಿಗೆ ಎಎಪಿ ಶಾಸಕರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರ ಹೆಸರನ್ನು ಸೂಚಿಸಲಾಗಿದೆ ಎಂದು ವರದಿಯಾಗಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರಾದ ಸೌರಭ್ ಭಾರದ್ವಾಜ್ ಮತ್ತು ಅತಿಶಿ ಅವರ ಹೆಸರನ್ನು ಸಂಪುಟ ಸಚಿವರಾಗಿ ಸೂಚಿಸಿ ದೆಹಲಿ ಎಲ್-ಜಿ ವಿಕೆ ಸಕ್ಸೇನಾ ಅವರಿಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೊಸದಾಗಿ ಸೇರ್ಪಡೆಗೊಂಡ ಸಚಿವರ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ 48 ಗಂಟೆಗಳಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಹಗರಣದ ಆರೋಪ ಹೊತ್ತಿರುವ ಮನೀಷ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ನಿನ್ನೆ ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಹೀಗಾಗಿ, ಸರ್ಕಾರದ ನಿರ್ವಹಣೆ ದೃಷ್ಟಿಯಿಂದ ಇಬ್ಬರು ಶಾಸಕರ ಹೆಸರನ್ನು ಸಚಿವ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ.