ನವದೆಹಲಿ, ಮಾ 01 (DaijiworldNews/DB): ಗೃಹ ಬಳಕೆಯ ಅಡುಗೆ ಅನಿಲದ ದರ ಮತ್ತೆ 50 ರೂಪಾಯಿ ಹೆಚ್ಚಳವಾಗಿರುವುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಹೋಳಿ ಹಬ್ಬಕ್ಕೂ ಮೊದಲೇ ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರ ಏರಿಕೆಯಾಗಿದೆ. ಪದೇ ಪದೇ ಈ ರೀತಿ ದರ ಏರಿಕೆ ಮಾಡಿದರೆ ಜನರು ಅಡುಗೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಸದ್ಯ ಹೋಳಿ ಹಬ್ಬ ಸನಿಹವಾಗುತ್ತಿದೆ. ಹೋಳಿ ಹಬ್ಬ ಎಂದರೆ ಸಂಭ್ರಮದ ಹಬ್ಬ. ಜನ ವಿವಿಧ ಖಾದ್ಯಗಳನ್ನು ತಯಾರಿಸಿ ಹಬ್ಬದೂಟ ಮಾಡುವುದು ಸಾಮಾನ್ಯ. ಆದರೆ ಅಡುಗೆ ಅನಿಲ ಬೆಲೆ ಏರಿಕೆಯಿಂದ ಹಬ್ಬದೂಟಕ್ಕೂ ಸಂಕಷ್ಟ ಎದುರಾಗಿದೆ. ಜನ ತಿನ್ನೋದು ಬೇಡವೇ? ಇಂತಹ ಲೂಟಿಗೆ ಕೊನೆ ಯಾವಾಗ ಎಂದು ಕೇಳಿದ್ದಾರೆ.
ಮೋದಿ ಸರ್ಕಾರದಲ್ಲಿ ಜನರು ಇನ್ನೆಷ್ಟು ಕಷ್ಟ ಪಡಬೇಕೋ ತಿಳಿಯದು ಎಂದು ಖರ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.