ಲಖನೌ, ಮಾ 01 (DaijiworldNews/DB): ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ನಡೆದ ರೈಲು ಸ್ಫೋಟ ಪ್ರಕರಣದ ಎಂಟು ಮಂದಿ ಅಪರಾಧಿಗಳ ಪೈಕಿ ಏಳು ಮಂದಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ವಿಶೇಷ ಎನ್ಐಎ ಕೋರ್ಟ್ ಇಂದು ತೀರ್ಪು ನೀಡಿದೆ. ಓರ್ವ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಮೊಹಮ್ಮದ್ ಫೈಸಲ್, ಗೌಸ್ ಮೊಹಮ್ಮದ್, ಅಜರ್, ಅತೀಫ್ ಮುಜಾಫರ್, ಡ್ಯಾನಿಶ್, ಮೀರ್ ಹುಸೇನ್, ಆಸಿಫ್, ಇಕ್ಬಾಲ್ ಮತ್ತು ಅತೀಫ್ ಇರಾನಿ ಶಿಕ್ಷೆಗೊಳಗಾದವರು. ಲಖನೌ ನ್ಯಾಯಾಲಯದಲ್ಲಿ ಪ್ರಕರಣದ ತನಿಖೆ ನಡೆದಿದ್ದು, ಕಳೆದ ಶುಕ್ರವಾರವೇ ಎಂಟು ಆರೋಪಿಗಳನ್ನು ದೋಷಿಗಳು ಎಂಬುದಾಗಿ ಎನ್ಐಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿವೇಕಾನಂದ ಶರಣ್ ಪಾಂಡೆ ಘೋಷಿಸಿದ್ದರು. ಆದರೆ ಶಿಕ್ಷೆ ಪ್ರಮಾಣವನ್ನು ಬುಧವಾರಕ್ಕೆ ಕಾಯ್ದಿರಿಸಲಾಗಿತ್ತು.
ಆರು ವರ್ಷಗಳ ಹಿಂದೆ ಶಾಜಾಪುರ ಸಮೀಪದ ಜಬ್ಡಿ ರೈಲು ನಿಲ್ದಾಣದಲ್ಲಿ ನಡೆದ ಭೋಪಾಲ್-ಉಜ್ಜಯಿನಿ ಪ್ಯಾಸೆಂಜರ್ ರೈಲಿನಲ್ಲಿ ಸ್ಫೋಟ ಪ್ರಕರಣದಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದರು. ಸ್ಪೋಟದಿಂದ ಹೆದರಿ ಕೆಲವರು ರೈಲಿನಿಂದ ಹಾರಿ ಗಾಯಗೊಂಡಿದ್ದರು. ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು.