ಚಿಕ್ಕಮಗಳೂರು, ಮಾ 01 (DaijiworldNews/DB): ಶೇಕಡಾ 17ರಷ್ಟು ವೇತನ ಏರಿಕೆ ಮಾಡುವುದಾಗಿ ಭರವಸೆ ನೀಡಿದ ಸರ್ಕಾರದ ಮೇಲೆ ಸರ್ಕಾರಿ ನೌಕರರಿಗೆ ನಂಬಿಕೆ ಇಲ್ಲ. ಅವರು ಹಣ ಎಲ್ಲಿಂದ ತರುತ್ತಾರೆ ಎಂಬುದೇ ಈಗಿರುವ ಪ್ರಶ್ನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಸರ್ಕಾರಿ ನೌಕರರಿಗೆ ವೇತನ ಏರಿಕೆಯ ನಿರ್ಧಾರವನ್ನು ಬಜೆಟ್ ಮಂಡನೆ ವೇಳೆಯೇ ಘೋಷಣೆ ಮಾಡಬೇಕಿತ್ತು. ಹಾಗೆ ಮಾಡಿರುತ್ತಿದ್ದರೆ ಈಗ ಸಮಸ್ಯೆಯೇ ಇರುತ್ತಿರಲಿಲ್ಲ. ಇದೀಗ ಶೇಕಡಾ 17 ವೇತನ ಏರಿಕೆ ಮಾಡುತ್ತೇವೆಂದು ಸಿಎಂ ಭರವಸೆ ನೀಡಿದ್ದಾರೆ. ಆದರೆ ಈ ಭರವಸೆ ಮೇಲೆ ಸರ್ಕಾರಿ ನೌಕರರಿಗೆ ನಂಬಿಕೆ ಇಲ್ಲ ಎಂದರು.
ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಗೆ ಉತ್ತಮ ಬೆಂಬಲ ದೊರಕಿದೆ. ಜನ ತಮ್ಮ ಸಮಸ್ಯೆಗಳನ್ನು ತೋಡಿಕೊಂಡಿದ್ದಾರೆ. ಶಾಸಕರಿಂದ ಮತ ನೀಡಿದವರಿಗೆ ಮತ್ತು ಮತ ನೀಡದವರಿಗೆ ಆಗುತ್ತಿರುವ ತಾರತಮ್ಯಗಳ ಬಗ್ಗೆಯೂ ಜನ ಹೇಳಿದ್ದಾರೆ ಎಂದು ತಿಳಿಸಿದರು.
ಜೆಸಿಬಿ ಮೂಲಕ ಬಿಜೆಪಿ ಖಜಾನೆಯನ್ನು ಲೂಟಿಗೈಯುವಲ್ಲಿ ನಿರತವಾಗಿದೆ. ಅವರ ಭದ್ರ ಕೋಟೆಗಳೇ ಅಲೆದಾಡುತ್ತಿವೆ. ರಾಷ್ಟ್ರೀಯ ಪಕ್ಷಗಳೆರಡನ್ನು ಕೂಡಾ ಜನ ತಿರಸ್ಕರಿಸಲು ಸಮಯ ಬಂದಿದೆ ಎಂದು ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಬಗ್ಗೆ ಪದೇ ಪದೇ ಚರ್ಚಿಸುವ ಕೆಲಸ ಮಾಡುವುದು ಸಿದ್ದರಾಮಯ್ಯನವರಿಗೆ ಒಳಿತಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಕೆಡಲು ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ಕೂಡಾ ಕಾರಣ. ಆ ಎರಡೂ ಪಕ್ಷಗಳಿಗಿಂತ ಜೆಡಿಎಸ್ ಕಡೆಗೆ ಜನ ಬೆಂಬಲ ಜಾಸ್ತಿಯೇ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.