ಲಕ್ನೋ, ಮಾ 01 (DaijiworldNews/DB): ಕೊಲೆ ಪ್ರಕರಣದ ಸಾಕ್ಷಿಯಾದ ವ್ಯಕ್ತಿಯ ಹತ್ಯೆಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ಗ್ಯಾಂಗ್ಸ್ಟರ್ ವೊಬ್ಬನ ಸಂಬಂಧಿಯ ಮನೆ ಮೇಲೆ ಬುಲ್ಡೋಜರ್ ದಾಳಿ ನಡೆಸಿ ಮನೆ ಧ್ವಂಸ ಮಾಡಲಾಗಿದೆ.
ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಎಂಬಾತನ ಹತ್ತಿರದ ಸಂಬಂಧಿ ಜಾಫರ್ ಅಹ್ಮದ್ ಮನೆಗೆ ಬುಲ್ಡೋಜರ್ ದಾಳಿಯಾಗಿದೆ. 2005ರಲ್ಲಿ ನಡೆದ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ಎಂಬವರನ್ನು ಪ್ರಯಾಗ್ರಾಜ್ನಲ್ಲಿರುವ ಅವರ ಮನೆ ಹೊರಭಾಗದಲ್ಲಿ ಗುಂಡಿನ ದಾಳಿ ನಡೆಸಿ ಶುಕ್ರವಾರ ಹತ್ಯೆ ಮಾಡಲಾಗಿತ್ತು. ಐವರಿಂದ ನಡೆದ ದಾಳಿಯಲ್ಲಿ ವಕೀಲರ ಭದ್ರತಾ ಸಿಬಂದಿ ಕೂಡಾ ಸಾವನ್ನಪ್ಪಿದ್ದರು. ಈ ಹತ್ಯೆಗೆ ಗ್ಯಾಂಗ್ಸ್ಟರ್ ಹಾಗೂ ಸಮಾಜವಾದಿ ಪಕ್ಷದ ಮಾಜಿ ನಾಯಕ ಅತೀಕ್ ಅಹ್ಮದ್ ಯೋಜನೆ ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದರು.
ಈತ ಅಹಮದಾಬಾದ್ನ ಜೈಲಿನಲ್ಲಿದ್ದು, ಅಲ್ಲಿ ಪೊಲೀಸರ ಮುಂದೆ ಹೇಳಿಕೆ ದಾಖಲಿಸುವ ಮುನ್ನ ಸಾಕ್ಷಿಯನ್ನು ಕೊಲ್ಲಲು ಯೋಜಿಸಿದ್ದ. ಅದಕ್ಕಾಗಿ ತನ್ನ ಐದಾರು ಮಂದಿ ಸಹಚರರನ್ನು ಕಳುಹಿಸಿದ್ದ ಎಂದು ಪೊಲೀಸರು ಆಪಾದಿಸಿದ್ದಾರೆ. ಅತೀಕ್ ಅಹ್ಮದ್, ಆತನ ಪುತ್ರ ಅಸದ್ ಅಹ್ಮದ್, ಪತ್ನಿ ಹಾಗೂ ಬಿಎಸ್ಪಿ ನಾಯಕಿ ಶೈಸ್ತಾ ಪರ್ವೀನ್ ಅವರ ಹೆಸರು ಎಫ್ಐಆರ್ನಲ್ಲಿ ದಾಖಲಾಗಿದೆ. ಇನ್ನು ಪೊಲೀಸರು ಸೋಮವಾರ ನಡೆಸಿದ ಎನ್ಕೌಂಟರ್ನಲ್ಲಿ ಆತನ ಸಹಚರನೊಬ್ಬ ಸಾವನ್ನಪ್ಪಿದ್ದ. ಇನ್ನು ಲಕ್ನೋದಲ್ಲಿರುವ ಅತೀಕ್ ಮನೆಯ ಮೇಲೆ ಬುಧವಾರ ಬೆಳಗ್ಗೆ ಪೊಲೀಸರು ದಾಳಿ ನಡೆಸಿದ್ದು, ಎರಡು ಐಷಾರಾಮಿ ಕಾರುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.