ಬೆಳಗಾವಿ, ಮಾ 01 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರು ಆರು ಸಾವಿರ ರೂಪಾಯಿ ನೀಡಿದ್ದೇನೆಂದು ಹೇಳುತ್ತಾ ತಿರುಗುತ್ತಿದ್ದಾರೆ. ಆದರೆ ರೈತರನ್ನು ಸುಲಿಗೆ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಬೆಳಗಾವಿಯ ಪಂಥಬಾಳೇಕುಂದ್ರಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಮಜ್ಜಿಗೆ, ಪೆನ್ಸಿಲ್, ಗೊಬ್ಬರ ಹೀಗೆ ಪ್ರತಿಯೊಂದರ ಮೇಲೆಯೂ ತೆರಿಗೆ ವಿಧಿಸಿ ರೈತರನ್ನು ಹೈರಾಣಾಗಿಸಿದ್ದೀರಿ. ನಾಲ್ಕೂವರೆ ಲಕ್ಷ ಕೋಟಿ ರೂಪಾಯಿಗಳನ್ನು ನಮ್ಮದೇ ರಾಜ್ಯದಿಂದ ಸುಲಿಗೆ ಮಾಡಿದ ನೀವು ನೀಡಿದ್ದು ಕೇವಲ ಐವತ್ತು ಸಾವಿರ ಕೋಟಿ ರೂ. ಮಾತ್ರ. ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನರಿಗೆ ಇದೀಗ ಎಲ್ಪಿಜಿ ಸಿಲಿಂಡರ್ಗೆ ಮತ್ತೆ 50 ರೂ. ಹೆಚ್ಚಳ ಹೆಚ್ಚಳ ಮಾಡಿ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಮಲ್ಲಿಕಾರ್ಜುನ ಖರ್ಗೆಯವರಿಗೆ ಕಾಂಗ್ರೆಸ್ ಅಪಮಾನ ಮಾಡಿದೆ ಎಂಬ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಹಿರಿಯ ನಾಯಕರಾದ ಮುರಳಿ ಮನೋಹರ್ ಜೋಶಿ, ಎಲ್.ಕೆ. ಅಡ್ವಾಣಿ ಅವರನ್ನು ಅವಗಣನೆ ಮಾಡಿದವರು ಯಾರು? ಬಿಸ್ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಯಾರು? ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಈ ನಾಯಕರುಗಳನ್ನು ಕಡೆಗಣನೆ ಮಾಡಿದರು. ಆದರೆ ಈಗ ನಾಟಕ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಕುಟುಕಿದರು.