ಚೆನ್ನೈ, ಮಾ 01 (DaijiworldNews/DB): ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರಧಾನಿ ಯಾಕಾಗಬಾರದು? ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ಆಗಮಿಸಿರುವ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸ್ಟಾಲಿನ್ ಅವರು ಪ್ರಧಾನಿ ಅಭ್ಯರ್ಥಿಯಾಗಲು ಸಮರ್ಥರು ಎಂದರು.
ಪ್ರತಿಪಕ್ಷಗಳ ಒಗ್ಗಟ್ಟಿಗಾಗಿ ಡಿಎಂಕೆ ಪಕ್ಷ ತುಂಬಾ ಶ್ರಮ ವಹಿಸುತ್ತಿದೆ. ಇದೊಂದು ಅದ್ಬುತ ಆರಂಭವಾಗಿದೆ. ಭಾರತದ ಏಕತೆ ಕಾಪಾಡುವ ನಿಟ್ಟಿನಲ್ಲಿ ಅವರ ಶ್ರಮ ನಿಜವಾಗಿಯೂ ದೊಡ್ಡದು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತವನ್ನು ಒಗ್ಗೂಡಿಸಿ, ಸಮರ್ಥ ರಾಷ್ಟ್ರವಾಗಿಸಲು ಪ್ರತಿಪಕ್ಷಗಳನ್ನು ಒಟ್ಟುಗೂಡಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಮೊದಲು ನಾವೆಲ್ಲರೂ ಒಂದಾಗಿ ಗೆಲುವು ಸಾಧಿಸಬೇಕು. ಆ ಗೆಲುವಿನ ಬಳಿಕ ದೇಶವನ್ನು ಮುನ್ನಡೆಸಲು ಸಮರ್ಥರು ಯಾರು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದರು.