ನವದೆಹಲಿ, ಮಾ. 1 (DaijiworldNews/SM): ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಾಗ್ದಾಳಿ ನಡೆಸಿದ್ದಾರೆ. ಸಿಸೋಡಿಯಾ ಇಂದು ಬಿಜೆಪಿಗೆ ಸೇರಿದರೆ ನಾಳೆಯೇ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂದು ಬುಧವಾರ ಹೇಳಿದ್ದಾರೆ.
ಮನೀಶ್ ಸಿಸೋಡಿಯಾ ಅವರನ್ನು ಬಂಧಿಸುವ ಮೂಲಕ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸರ್ಕಾರದ ಕೆಲಸವನ್ನು ಹಾಳು ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ದೆಹಲಿ ಸಿಎಂ ಆರೋಪಿಸಿದ್ದಾರೆ.
ಸಿಸೋಡಿಯಾ ಬಂಧನದ ನಂತರ ಮೊದಲ ಬಾರಿಗೆ ಕೇಜ್ರಿವಾಲ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ಅವರಿಗೆ ಭ್ರಷ್ಟಾಚಾರ ವಿಷಯವೇ ಅಲ್ಲ. ತಮ್ಮ ಸಚಿವರು ಮಾಡಿದ ಒಳ್ಳೆಯ ಕೆಲಸವನ್ನು ನಿಲ್ಲಿಸುವುದು ಅವರು ಉದ್ದೇಶವಾಗಿಗೆ" ಎಂದು ವಾಗ್ದಾಳಿ ನಡೆಸಿದರು.
"ಬಿಜೆಪಿಯು ಎಎಪಿಯ ಬೆಳವಣಿಗೆಯನ್ನು ತಡೆಯಲು ಬಯಸುತ್ತಿದೆ. ನಾವು ಪಂಜಾಬ್ ಗೆದ್ದಾಗಿನಿಂದ, ನಮ್ಮನ್ನು ಎದುರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ" ಎಂದು ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.