ಮಾಲೆಗಾಂವ್, ಮಾ 01 (DaijiworldNews/MS): ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆಟೋರಿಕ್ಷಾ ಚಾಲಕನಿಗೆ ಎರಡು ಮರಗಳನ್ನು ನೆಡಲು ಮತ್ತು ದಿನಕ್ಕೆ ಐದು ಬಾರಿ ನಮಾಜ್ ಮಾಡಲು ಶಿಕ್ಷೆಯನ್ನು ವಿಧಿಸಿದೆ.
ಪ್ರಕರಣದ ವಿವರ:ಸುಮಾರು ಹದಿಮೂರು ವರ್ಷಗಳ ಹಿಂದೆ ಮಾಲೇಗಾಂವ್ನ ಕಿರಿದಾದ ರಸ್ತೆಯಲ್ಲಿ ರಿಕ್ಷಾ ಚಲಾಯಿಸುತ್ತಿದ್ದ ರೌಫ್ ಖಾನ್(30) ಎದುರಿಗೆ ರಸ್ತೆ ಬದಿಯಲ್ಲಿ ನಿಂತಿದ್ದ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ, ಈ ವೇಳೆ ದ್ವಿಚಕ್ರ ಸವಾರ ರಿಕ್ಷಾ ಚಾಲಕನಲ್ಲಿ ಪ್ರಶ್ನೆ ಎತ್ತಿದ್ದಾನೆ ಇದರಿಂದ ಕೋಪಗೊಂಡ ರಿಕ್ಷಾ ಚಾಲಕ, ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ಕುರಿತು ಬೈಕ್ ಸವಾರ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಖಾನ್ ಮೇಲೆ ಐಪಿಸಿ ಸೆಕ್ಷನ್ 323 (ಉದ್ದೇಶಪೂರ್ವಕವಾಗಿ ಘಾಸಿ ಮಾಡಿರುವುದು), 325 (ಸ್ವಯಂಪ್ರೇರಣೆಯಿಂದ ತೀವ್ರ ಗಾಯಕ್ಕೆ ಮಾಡಿರುವುದು), 504 (ಶಾಂತಿ ಕದಡಲು ಪ್ರಚೋದನೆ ನೀಡಿರುವುದು) ಮತ್ತು 506 (ಬೆದರಿಕೆ) ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಅದರಂತೆ ಪ್ರಕರಣ ಆಲಿಸಿದ ಮಾಲೇಗಾಂವ್ ಮಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಧೀಶ ತೇಜ್ವಂತ್ ಸಂಧು ವಿಶೇಷ ತೀರ್ಪು ನೀಡಿದ್ದಾರೆ. ಪ್ರೊಬೇಷನ್ ಆಕ್ಟ್, 1958 ರ ಸೆಕ್ಷನ್ 3, ಅಪರಾಧಿಯನ್ನು ಎಚ್ಚರಿಕೆ ಅಥವಾ ಸೂಕ್ತ ಎಚ್ಚರಿಕೆಯ ನಂತರ ಬಿಡುಗಡೆ ಮಾಡಲು ಮ್ಯಾಜಿಸ್ಟ್ರೇಟ್ಗೆ ಅಧಿಕಾರವಿದ್ದು, ಇಲ್ಲಿ ಅಪರಾಧಿಗೆ ಎಚ್ಚರಿಕೆಯು ಸಾಕಾಗುವುದಿಲ್ಲ ಎಂದು ನ್ಯಾಯಾಲಯವು ತರ್ಕಿಸಿದೆ .ವಿಚಾರಣೆ ವೇಳೆ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದರೂ ನಮಾಜ್ ಮಾಡುತ್ತಿರಲಿಲ್ಲ ಎಂದು ರೌಖ್ ಖಾನ್ ಹೇಳಿಕೊಂಡಿದ್ದಾನೆ. ಇದನ್ನು ವಿಮರ್ಶಿಸಿ ಹಾಗೂ ಆತನಿಗೆ ಎಚ್ಚರಿಕೆಯು ಸಾಕಾಗುವುದಿಲ್ಲ ಎಂದು ನ್ಯಾಯಾಲಯವು ತರ್ಕಿಸಿ
ಆತನಿಗೆ ದಿನಕ್ಕೆ ಐದು ಬಾರಿ ನಮಾಜ್ ಮಾಡುವುದು ಜೊತೆಗೆ ದಿನಕ್ಕೆ ಎರಡು ಗಿಡಗಳನ್ನು ನೆಟ್ಟು ಪೋಷಿಸುವಂತೆ ಷರತ್ತು ವಿಧಿಸಿ ತೀರ್ಪು ನೀಡಿದೆ.