ಮುಂಬೈ, ಮಾ 02 (DaijiworldNews/DB): ದೇಶದ ಬ್ಯಾಂಕ್ಗಳಲ್ಲಿ ವಾರಕ್ಕೆ ಐದೇ ದಿನ ಕೆಲಸದ ವ್ಯವಸ್ಥೆ ಶೀಘ್ರ ಜಾರಿಗೊಳ್ಳಲಿದೆ. ಈ ಸಂಬಂಧ ಈಗಾಗಲೇ ಮಾತುಕತೆಗಳು ನಡೆದಿದ್ದು, ತಾತ್ವಿಕ ಒಪ್ಪಿಗೆಯೂ ಸಿಕ್ಕಿದೆ.
ಬ್ಯಾಂಕಿಂಗ್ ವ್ಯವಸ್ಥೆಯ ಕೆಲಸದ ಅವಧಿಯಲ್ಲಿ ಶೀಘ್ರ ಬದಲಾವಣೆ ಆಗಲಿದೆ. ವಾರಕ್ಕೆ ಐದೇ ದಿನ ಕೆಲಸ ನಿರ್ವಹಿಸಿ ಶನಿವಾರ ಮತ್ತು ಭಾನುವಾರ ರಜೆ ನೀಡುವ ವ್ಯವಸ್ಥೆ ಶೀಘ್ರ ಜಾರಿಯಾಗಲಿದೆ. ಈ ಸಂಬಂಧ ಭಾರತೀಯ ಬ್ಯಾಂಕ್ ಅಸೋಸಿಯೇಶನ್ ಮತ್ತು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಎಂಪ್ಲಾಯೀಸ್ ನಡುವೆ ಮಾತುಕತೆಗಳು ಆರಂಭವಾಗಿದ್ದು, ಅಸೋಸಿಯೇಶನ್ನಿಂದ ಇದಕ್ಕೆ ತಾತ್ವಿಕ ಒಪ್ಪಿಗೆ ಕೂಡಾ ಲಭಿಸಿದೆ ಎಂದು ತಿಳಿದು ಬಂದಿದೆ.
ಪ್ರಸ್ತುತ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್ಗೆ ರಜೆ ಇದೆ. ಇದನ್ನು ತಿಂಗಳ ಎಲ್ಲಾ ಶನಿವಾರಗಳಿಗೆ ವಿಸ್ತರಿಸಿ ವಾರದಲ್ಲಿ ಐದು ದಿನ ಕೆಲಸ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. ಆ ಮೂಲಕ ಪ್ರತಿ ಶನಿವಾರ ಮತ್ತು ಭಾನುವಾರ ಬ್ಯಾಂಕ್ ಸಿಬಂದಿ ರಜೆ ಪಡೆಯಲಿದ್ದಾರೆ. ಆದರೆ ದಿನದ ಕೆಲಸದ ಅವಧಿಯಲ್ಲಿ ಕೂಡಾ ಬದಲಾವಣೆಗಳಾಗಲಿದ್ದು, ಶನಿವಾರದ ರಜೆ ಬದಲಿಗೆ ಇತರ ದಿನಗಳಲ್ಲಿ 40ರಿಂದ 50 ನಿಮಿಷ ಹೆಚ್ಚುವರಿ ಕೆಲಸವನ್ನು ಸಿಬಂದಿ ಮಾಡಬೇಕಾಗುತ್ತದೆ. ಅಂದರೆ ಬೆಳಗ್ಗೆ 9.45ರಿಂದ ಸಂಜೆ 5.30ರ ತನಕ ಸಿಬಂದಿ ಕೆಲಸ ನಿರ್ವಹಿಸಬೇಕಾಗುತ್ತದೆ ಎನ್ನಲಾಗಿದೆ.
ನಿರ್ಧಾರ ಅಂತಿಮಗೊಂಡ ಬಳಿಕ ಕೇಂದ್ರ ವಿತ್ತ ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತದೆ. ಆರ್ಬಿಐಗೂ ಪ್ರಸ್ತಾವನೆ ಸಲ್ಲಿಸಿ ಒಪ್ಪಿಗೆ ಪಡೆಯುವ ಪ್ರಕ್ರಿಯೆ ನಡೆಯುತ್ತದೆ ಎಂದು ಅಖೀಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ನಾಗರಾಜನ್ ತಿಳಿಸಿದ್ದಾರೆ.