ಚೆನ್ನೈ, ಮಾ 02 (DaijiworldNews/DB): ಮುಂದಿನ ಪ್ರಧಾನಿ ಯಾರಾಗಬೇಕು ಎಂಬುದನ್ನು ಆಮೇಲೆ ಯೋಚಿಸೋಣ. ಮೊದಲು ಎಲ್ಲರೂ ಒಗ್ಗಟ್ಟಾಗಿ ಬಿಜೆಪಿ ಸೋಲಿಸುವುದರತ್ತ ಗಮನ ಹರಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಚೆನ್ನೈಯಲ್ಲಿ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರ 70ನೇ ಹುಟ್ಟುಹಬ್ಬದ ಅಂಗವಾಗಿ ವಿಪಕ್ಷ ನಾಯಕರ ಭಾಗಿದಾರಿಕೆ ವೇಳೆ ಮಾತನಾಡಿದ ಅವರು, ಬಿಜೆಪಿ ವಿರುದ್ದ ವಿಪಕ್ಷಗಳೆಲ್ಲಾ ಒಟ್ಟಾಗಬೇಕು. ಕೂಟವಾಗಿ ವಿಪಕ್ಷಗಳು ಸ್ಪರ್ಧಿಸಬೇಕು. ಬಿಜೆಪಿಯನ್ನು ಸೋಲಿಸಿದ ಬಳಿಕ ಯಾರು ಪ್ರಧಾನಿಯಾಗಬೇಕು ಎಂದು ಒಟ್ಟಾಗಿ ಕುಳಿತು ಚರ್ಚಿಸೋಣ ಎಂದರು.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಬಳಿಕ ದೇಶದಲ್ಲಿ ಹೊಸ ಭರವಸೆ ಸೃಷ್ಟಿಯಾಗಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ನಾವೆಲ್ಲಾ ಒಂದಾದರೆ ಯಶಸ್ಸು ನಿಶ್ಚಿತ. ಇದು ಕಾಂಗ್ರೆಸ್ನ ಲೆಕ್ಕಾಚಾರ. ಎಲ್ಲಾ ಸಮಾನ ಮನಸ್ಕ ಪಕ್ಷಗಳು ಒಂದಾದರೆ ದೇಶದಲ್ಲಿ ಬದಲಾವಣೆಯಾಗಲು ಸಾಧ್ಯ. ಕಾಂಗ್ರೆಸ್ನವರೇ ಪ್ರಧಾನಿಯಾಗಬೇಕೆಂಬ ಇರಾದೆಯಿಲ್ಲ, ಆದರೆ ನಾಯಕತ್ವವನ್ನು ಕಾಂಗ್ರೆಸ್ ವಹಿಸಿಕೊಳ್ಳಬೇಕು ಎಂದವರು ಹೇಳಿದರು.
ಎಸ್ಪಿಯ ಅಖಿಲೇಶ್ ಯಾದವ್, ಎಸ್ಸಿಯ ಫಾರೂಕ್ ಅಬ್ದುಲ್ಲಾ, ಆರ್ಜೆಡಿಯ ತೇಜಸ್ವಿ ಯಾದವ್ ಸಹಿತ ವಿವಿಧ ನಾಯಕರು ಭಾಗಿಯಾಗಿದ್ದರು.