ಚಾಮರಾಜನಗರ, ಮಾ 02 (DaijiworldNews/DB): ಚುನಾವಣೆಯಲ್ಲಿ ಸೋಲುವ ಭಯದಿಂದ ಸಿದ್ದರಾಮಯ್ಯ ಅವರು ಕ್ಷೇತ್ರ ಬದಲಿಸಿದ್ದಾರೆ. ಆದರೆ ಅವರನ್ನು ಬಿಜೆಪಿಗಿಂತ ಕಾಂಗ್ರೆಸ್ನ ಒಳಗಿರುವವರೇ ಸೋಲಿಸುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರದಲ್ಲಿ ಸ್ಪರ್ಧಿಸಲು ಅವರಿಗೆ ಹೈಕಮಾಂಡ್ ಹೇಳಿತ್ತಾ? ಅವರು ಸೋಲುವ ಭಯದಿಂದಲೇ ಕೋಲಾರಕ್ಕೆ ತನ್ನ ಕ್ಷೇತ್ರ ಬದಲಾವಣೆ ಮಾಡಿದ್ದಾರೆ. ಅಲ್ಲಿ ಅವರನ್ನು ಸೋಲಿಸಲು ಬಿಜೆಪಿಗರು ಬೇಕೆಂದಿಲ್ಲ. ಕಾಂಗ್ರೆಸ್ನವರೇ ಸೋಲಿಸುತ್ತಾರೆ ಎಂದು ಕುಟುಕಿದರು.
ಸಿಎಂ ಹುದ್ದೆಗೆ ಪ್ರತಿಸ್ಪರ್ಧಿಯಾಗುತ್ತಾರೆಂಬ ಕಾರಣಕ್ಕೆ ಪರಮೇಶ್ವರ್ ಅವರನ್ನು ಸೋಲಿಸಿದರು. ಆ ಬಳಿಕ ರಮೇಶ್ಕುಮಾರ್ ಮೂಲಕ ಮುನಿಯಪ್ಪರನ್ನು ಸೋಲಿಸಿದರು. ಒಕ್ಕಲಿಗರು, ದಲಿತರನ್ನು ಬಿಟ್ಟು ಮುಸ್ಲಿಂ ಓಲೈಕೆಗೆ ಮುಂದಾಗಿರುವ ಅವರನ್ನು ಸೋಲಿಸಲು ಈ ಎರಡೂ ಸಮಯದಾಯದವರು ಕಾಯುತ್ತಿದ್ದಾರೆ ಎಂದರು.
ಯಡಿಯೂರಪ್ಪ ಮತ್ತು ವಿ. ಸೋಮಣ್ಣ ನಡುವೆ ಯಾವುದೇ ವೈಮನಸ್ಯ ಇಲ್ಲ. ಅನಾರೋಗ್ಯದ ಕಾರಣದಿಂದಾಗಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಸೋಮಣ್ಣ ಹಾಜರಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನೇ ಸಿಎಂ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಆಶಾಭಾವ ಎಂಬುದು ಪ್ರತಿ ರಾಜಕಾರಣಿಗೆ ಇರುತ್ತದೆ. ಬಹುಮತ ಬರುವುದಿಲ್ಲ ಎಂಬುದು ಸ್ವತಃ ಕುಮಾರಸ್ವಾಮಿಗೇ ಗೊತ್ತು. ಯಾವುದಾದರೂ ಒಂದು ಪಕ್ಷದೊಂದಿಗೆ ಸೇರಿ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂಬ ಆಸೆ ಅವರಲ್ಲಿದೆ ಎಂದು ಲೇವಡಿ ಮಾಡಿದರು.