ಬೆಂಗಳೂರು, ಮಾ 02 (DaijiworldNews/DB): ತಾಯಿ ನಿದ್ದೆ ಮಾಡಿದ್ದಾರೆಂದು ತಿಳಿದು 11 ವರ್ಷದ ಬಾಲಕನೊಬ್ಬ ಆಕೆಯ ಶವದೊಂದಿಗೆ ಎರಡು ದಿನ ಕಳೆದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಆರ್.ಟಿ. ನಗರದಲ್ಲಿ ನಡೆದಿದೆ.
ಅಣ್ಣಮ್ಮ ( 44) ಅವರು ಫೆಬ್ರವರಿ 26ರಂದು ಮಧುಮೇಹ ಮತ್ತು ರಕ್ತದೊತ್ತಡ ಕಡಿಮೆಯಾಗಿ ಮನೆಯಲ್ಲಿ ಮಲಗಿದ್ದಾಗಲೇ ಸಾವನ್ನಪ್ಪಿದ್ದರು. ಅವರ 11 ವರ್ಷದ ಪುತ್ರ ತಾಯಿ ತನ್ನೊಂದಿಗೆ ಕೋಪದಿಂದ ಮಾತನಾಡದೇ ಮಲಗಿದ್ದಾರೆ ಎಂದೇ ಭಾವಿಸಿದ್ದ. ಎರಡು ದಿನ ತಾಯಿ ಮಲಗಿಯೇ ಇದ್ದು ಬಾಲಕನಿಗೆ ಆಕೆ ಮೃತಪಟ್ಟಿರುವುದು ಅರಿವಿಗೇ ಬಂದಿರಲಿಲ್ಲ. ಬಳಿಕ ತನ್ನ ತಂದೆಯ ಸ್ನೇಹಿತರಿಗೆ ತಾಯಿ ಮಾತನಾಡದಿರುವ ಬಗ್ಗೆ ತಿಳಿಸಿದ್ದಾನೆ. ಕೂಡಲೇ ಅವರು ಮನೆಗೆ ದೌಡಾಯಿಸಿದ್ದು, ಈ ವೇಳೆ ನೋಡಿದಾಗ ಅಣ್ಣಮ್ಮ ಸಾವನ್ನಪ್ಪಿರುವುದು ಗೊತ್ತಾಗಿದೆ. ಆರ್.ಟಿ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಣ್ಣಮ್ಮ ಅವರ ಪತಿ ಕಿಡ್ನಿ ವೈಫಲ್ಯದಿಂದಾಗಿ ವರ್ಷದ ಹಿಂದೆ ಸಾವನ್ನಪ್ಪಿದ್ದರು. ಆ ಬಳಿಕ ಆರ್.ಟಿ.ನಗರ ಠಾಣೆ ವ್ಯಾಪ್ತಿಯ ರೇಣುಕಾ ಯಲ್ಲಮ್ಮ ಗಂಗಮ್ಮ ದೇವಸ್ಥಾನ ಬಳಿಯಿರುವ ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರೇ ವಾಸವಾಗಿದ್ದರು. ಎರಡು ದಿನಗಳ ಕಾಲ ಬಾಲಕ ಸ್ನೇಹಿತರೊಂದಿಗೆ ಆಟವಾಡಿ, ಅವರ ಮನೆಯಲ್ಲೇ ಊಟ ಮಾಡಿ ಹಿಂತಿರುಗುತ್ತಿದ್ದನು ಎಂದು ವರದಿಯಾಗಿದೆ.