ಬೆಳಗಾವಿ, ಮಾ 02 (DaijiworldNews/MS): ಬಿಜೆಪಿ ಸಂಪೂರ್ಣವಾಗಿ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ದಕ್ಷಿಣ ಭಾರತದ ನಂಬರ್ ವನ್ ರಾಜ್ಯವನ್ನಾಗಿ ಮಾಡಲಿದ್ದೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಬೆಳಗಾವಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಎರಡನೇ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಬಿಜೆಪಿಗೆ ಶುಭ ದಿನ ಆಗಿದೆ. ತ್ರಿಪುರಾ, ನಾಗಾಲ್ಯಾಂಡ್ನಲ್ಲಿ ಬಿಜೆಪಿ ಗೆದ್ದು ಸರ್ಕಾರ ರಚನೆ ಮಾಡಲಿದೆ. ಮೇಘಾಲಯದಲ್ಲಿ ಈಗಾಗಲೇ ಹೆಚ್ಚು ಸ್ಥಾನ ದೊರೆತಿವೆ. ಕರ್ನಾಟಕದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ದಕ್ಷಿಣಭಾರತದ ನಂಬರ್ ವನ್ ರಾಜ್ಯವನ್ನಾಗಿ ಮಾಡಲಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಹೊಗಳಿದ ರಾಜ್ ನಾಥ್ ಸಿಂಗ್ , ಆರೋಗ್ಯದ ಕಾರಣಕ್ಕಾಗಿ ಯಡಿಯೂರಪ್ಪ ಅಧಿಕಾರ ತ್ಯಾಗ ಮಾಡಿದ್ದಾರೆ. ಇಡೀ ಕರ್ನಾಟಕ ಅವರಿಗೆ ಸನ್ಮಾನ ಮಾಡಬೇಕು. ಅವರನ್ನು ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ಮಾಡಿದ್ದೇವೆ. ಅವರು ಕರ್ನಾಟಕಕ್ಕೆ ಮಾಡಿದ ಸೇವೆಯನ್ನು ಬಿಜೆಪಿ ಎಂದಿಗೂ ಮರೆಯುವುದಿಲ್ಲ. ಯಡಿಯೂರಪ್ಪ ಇಚ್ಛೆಯೊಂದಿಗೇ ಪೂರ್ಣ ಪ್ರಮಾಣದ ಸರ್ಕಾರ ರಚನೆ ಆಗಬೇಕು ಎಂದು ರಾಜನಾಥ್ ಸಿಂಗ್ ಹೇಳಿದರು.