ಮಹಾರಾಷ್ಟ್ರ, ಮಾ 02 (DaijiworldNews/DB): ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಈ ವೃದ್ದ ಜೋಡಿಯೊಂದು ಸಾಬೀತುಪಡಿಸಿದ್ದಾರೆ. ಆಶ್ರಮವಾಸಿಗಳಿಬ್ಬರು ಇಳಿ ವಯಸ್ಸಿನಲ್ಲಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬಾಬುರಾವ್ ಪಾಟೀಲ್ (75) ಹಾಗೂ ಅನುಸಯಾ ಶಿಂಧೆ (70) ಅವರೇ ಇಳಿ ವಯಸ್ಸಿನಲ್ಲಿ ಮದುವೆಯಾದ ವೃದ್ದ ಜೋಡಿ. ಇವರಿಬ್ಬರ ಪ್ರೀತಿಗೆ ಸೇತುವೆಯಾದದ್ದು ಮಹಾರಾಷ್ಟ್ರದ ಜಾನಕಿ ವೃದ್ದಾಶ್ರಮ. ಪತಿಯನ್ನು ಕಳೆದುಕೊಂಡ ಬಳಿಕ ಕಳೆದ ಕೆಲ ವರ್ಷಗಳಿಂದ ಅನುಸಯಾ ಅವರು ಜಾನಕಿ ವೃದ್ದಾಶ್ರಮಕ್ಕೆ ಸೇರಿದ್ದರು. ಪತ್ನಿಯನ್ನು ಕಳೆದುಕೊಂಡ ಬಾಬುರಾವ್ ಅವರೂ ವೃದ್ದಾಶ್ರಮವಾಸಿಯಾಗಿದ್ದರು. ಪರಸ್ಪರ ನಗು, ಮಾತಿನೊಂದಿಗೆ ಆರಂಭವಾಗುತ್ತಿದ್ದ ಇಬ್ಬರ ದಿನಚರಿ ತಿಂಗಳುಗಳುರುಳಿದಂತೆ ಆತ್ಮೀಯತೆಯ ಕಡೆಗೆ ತಿರುಗಿತ್ತು. ಪರಿಚಯ, ಸ್ನೇಹದ ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.
ಇಬ್ಬರೂ ತೀರಾ ಆಪ್ತವಾಗಿರುವುದನ್ನು ನೋಡಿದ ಆಶ್ರಮದ ಇತರ ವಾಸಿಗಳು ನೀವಿಬ್ಬರೂ ಮದುವೆಯಾಗಿ ಎಂದು ಪ್ರಸ್ತಾಪಿಸಿದ್ದರು. ಹೀಗಾಗಿ ಕೆಲ ದಿನಗಳ ಹಿಂದೆ ಬಾಬುರಾವ್ ಅವರು ಅನುಸಯಾ ಅವರಿಗೆ ಮದುವೆ ಪ್ರಸ್ತಾಪ ಮಾಡಿದ್ದರು. ಆರಂಭದಲ್ಲಿ ನಿರಾಕರಿಸಿದ ಅನುಸಯಾ, ಎಂಟು ದಿನಗಳ ಬಳಿಕ ಒಪ್ಪಿಗೆ ಸೂಚಿಸಿದ್ದರು. ಅದರಂತೆ ಆಶ್ರಮವಾಸಿಗಳೆಲ್ಲಾ ಸೇರಿಕೊಂಡು ಇಬ್ಬರಿಗೆ ಆಶ್ರಮದಲ್ಲೇ ಮದುವೆ ಮಾಡಿಸಿದ್ದಾರೆ.