ಹೈದರಾಬಾದ್, ಮಾ 02 (DaijiworldNews/DB): ಅತ್ತಿಗೆಯೊಂದಿಗೆ ಸಂಬಂಧ ಹೊಂದಿಲ್ಲವೆಂಬುದನ್ನು ಸಾಬೀತುಪಡಿಸುವ ಸಲುವಾಗಿ ವ್ಯಕ್ತಿಯೊಬ್ಬ ಅಗ್ನಿಪ್ರವೇಶ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಬಂಜಾರುಪಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಸಹೋದರನ ಪತ್ನಿಯೊಂದಿಗೆ ಸಂಬಂಧ ಹೊಂದಿರುವ ಆರೋಪವನ್ನು ಎದುರಿಸುತ್ತಿದ್ದ. ಈ ಸಂಬಂಧ ಗ್ರಾಮದಲ್ಲಿ ಪಂಚಾಯಿತಿಯನ್ನೂ ನಡೆಸಲಾಗಿತ್ತು. ಆದರೆ ಈ ವೇಳೆ ತಾನು ಅತ್ತಿಗೆಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸಲು ಅಗ್ನಿಪ್ರವೇಶ ಮಾಡಬೇಕೆಂಬ ತೀರ್ಪನ್ನು ಗ್ರಾಮದ ಮುಖಂಡರು ನೀಡಿದ್ದಾರೆ. ಅದರಂತೆ ವ್ಯಕ್ತಿ ಅಗ್ನಿಪ್ರವೇಶ ಮಾಡಿದ್ದಾನೆ. ಅಲ್ಲದೆ ಬೆಂಕಿಯಲ್ಲಿದ್ದ ರಾಡ್ನ್ನು ಕೈಯಿಂದ ಹೊರ ತೆಗೆದಿದ್ದಾನೆ.
ಇನ್ನು ಆತ ಅಗ್ನಿಪ್ರವೇಶ ಮಾಡಿ ಅತ್ತಿಗೆಯೊಂದಿಗೆ ಸಂಬಂಧ ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸಿದರೂ ಸುಮ್ಮನಾಗದ ಗ್ರಾಮದ ಮುಖಂಡರು, ಸಂಬಂಧ ಹೊಂದಿರುವುದನ್ನು ಒಪ್ಪಿಕೊಳ್ಳುವಂತೆ ಸತಾಯಿಸಿದ್ದಾರೆ. ಬಳಿಕ ಆರೋಪ ಹೊತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದೆ. ಶೀಲವತಿ ಎಂಬುದನ್ನು ತೋರಿಸಿಕೊಳ್ಳಲು ಪ್ರಾಚೀನ ಕಾಲದಲ್ಲಿ ಮಹಿಳೆಯರು ಅಗ್ನಿಪ್ರವೇಶ ಮಾಡುತ್ತಿದ್ದರು. ಆದರೆ ಇಂತಹ ಅನಿಷ್ಠ ಪದ್ದತಿ ಕಾಲಾನಂತರ ನಿಂತು ಹೋಗಿತ್ತು.