ಒಡಿಶಾ, ಮಾ 02 (DaijiworldNews/HR): ಒಡಿಶಾದ ಜಾಜ್ ಪುರ ಜಿಲ್ಲೆಯ ಬಿಂಜಾರ್ಪುರ್ ಬ್ಲಾಕ್ ನ ಚಿಕಾನಾ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಒಂದೇ ಒಂದು ಬಯಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಬರೋಬ್ಬರಿ 7 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಾಲಯವನ್ನು ಕಟ್ಟಿಸಿರುವ ಘಟನೆ ನಡೆದಿದೆ.
ಕೈಗಾಕಾರಿಕೋದ್ಯಮಿ ಕ್ಷೇತ್ರಬಾಸಿ ಲೆಂಕಾ ಅವರು ಪತ್ನಿ ಬೈಜಯಂತಿ ಲೆಂಕಾ ಅವರೊಂದಿಗೆ ಹೈದರಾಬಾದ್ ನಲ್ಲಿ ವಾಸವಾಗಿದ್ದು, ಬೈಜಯಂತಿ ಅವರು ಮಾ ಸಂತೋಷಿಯ ಪರಮ ಭಕ್ತೆಯಾಗಿದ್ದರು. ಈ ಸಂದರ್ಭದಲ್ಲಿ ತನ್ನ ಹುಟ್ಟೂರಾದ ಚಿಕಾನಾ ಗ್ರಾಮದಲ್ಲಿಯೂ ಮಾ ಸಂತೋಷಿ ದೇವಿಯ ದೇವಸ್ಥಾನವನ್ನು ಕಟ್ಟಿಸಬೇಕೆಂದು ಪತಿಯಲ್ಲಿ ಮನವಿ ಮಾಡಿಕೊಂಡಿದ್ದರಂತೆ.
ಇನ್ನು ಪತ್ನಿಯ ಕೋರಿಕೆಯನ್ನು ಪೂರ್ಣಗೊಳಿಸಲು 2008ರಲ್ಲಿ ಕ್ಷೇತ್ರಬಾಸಿ ಅವರು ಪತ್ನಿಯ ಹುಟ್ಟೂರಾದ ಚಿಕಾನಾ ಗ್ರಾಮದಲ್ಲಿ ದೇವಾಲಯದ ಕೆಲಸವನ್ನು ಆರಂಭಿಸಿದ್ದು, ಇದೀಗ ಏಳು ಕೋಟಿ ರೂಪಾಯಿ ವೆಚ್ಚದ ದೇವಸ್ಥಾನದ ನಿರ್ಮಾಣಗೊಂಡಿದೆ.