ತುಮಕೂರು, ಮಾ 02 (DaijiworldNews/DB): ನರಿ ಮುಖ ನೋಡಿದರೆ ಅದೃಷ್ಟ ಖುಲಾಯಿಸುತ್ತದೆ ಎಂದು ನಂಬಿದ್ದ ಉದ್ಯಮಿಯೊಬ್ಬ ಪ್ರತಿ ದಿನ ನರಿಯ ಮುಖ ನೋಡಲು ಮನೆಯಲ್ಲಿ ನರಿ ಸಾಕಿ ಪೊಲೀಸ್ ಅತಿಥಿಯಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ನಾಗವಲ್ಲಿ ಬಳಿಯ ಗ್ರಾಮದ ಉದ್ಯಮಿ ಲಕ್ಷ್ಮೀಕಾಂತ್ ನರಿ ಸಾಕಿ ಜೈಲು ಪಾಲಾದವರು. ಕೋಳಿ ಫಾರಂ ನಡೆಸುತ್ತಿದ್ದ ಲಕ್ಷ್ಮೀ ಕಾಂತ್ ಅದೇ ಕೋಳಿ ಫಾರಂನಲ್ಲಿ ಪ್ರತ್ಯೇಕ ರೂಂವೊಂದನ್ನು ನಿರ್ಮಿಸಿ ನರಿ ಸಾಕಲು ಆರಂಭಿಸಿದ್ದರು. ಪ್ರತಿ ದಿನ ಎದ್ದ ಕೂಡಲೇ ನರಿ ಮುಖ ನೋಡುತ್ತಿದ್ದುದಲ್ಲದೆ, ಪ್ರಮುಖ ಕೆಲಸಗಳಿಗೆ ಹೊರ ಹೋಗುವಾಗಲೂ ನರಿಯ ಮುಖ ನೋಡಿಯೇ ಹೋಗುತ್ತಿದ್ದರು. ಬೆಳಗ್ಗೆ ಎದ್ದ ಕೂಡಲೇ ನರಿ ಮುಖ ನೋಡಿದರೆ ಅದೃಷ್ಟ ಶತಸಿದ್ದ ಎಂಬ ಮಾತನ್ನು ನಂಬಿ ಅದರಂತೆ ಪಾಲಿಸುತ್ತಿದ್ದರು.
ನರಿ ಸಾಕಿದ ಬಳಿಕ ಕೋಳಿ ಫಾರಂನಲ್ಲಿಯೂ ಹೆಚ್ಚು ಲಾಭ ಗಳಿಸುತ್ತಿದ್ದ ಲಕ್ಷ್ಮೀಕಾಂತ್ ಬಗ್ಗೆ ವ್ಯಕ್ತಿಯೊಬ್ಬನಿಗೆ ಹೊಟ್ಟೆಯುರಿ ಆರಂಭವಾಗಿತ್ತು. ಹೇಗಾದರೂ ಮಾಡಿ ಲಕ್ಷ್ಮೀಕಾಂತ್ರಿಂದ ನರಿಯನ್ನು ದೂರ ಮಾಡಬೇಕೆಂದು ಹೊಂಚು ಹಾಕಿದ್ದ ಅನಾಮಿಕ ವ್ಯಕ್ತಿಯು ನರಿ ಸಾಕುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಇದರಿಂದ ಲಕ್ಷ್ಮೀಕಾಂತ್ ಕೋಳಿ ಫಾರಂಗೆ ದಾಳಿ ಮಾಡಿದ ಅರಣ್ಯ ಅಧಿಕಾರಿಗಳು ನರಿಯನ್ನು ರಕ್ಷಿಸಿ ಅಕ್ರಮವಾಗಿ ನರಿಯನ್ನು ಬೋನ್ನಲ್ಲಿ ಬಂಧಿಸಿದ್ದ ಲಕ್ಷ್ಮೀಕಾಂತ್ ವಿರುದ್ದ ದೂರು ದಾಖಲು ಮಾಡಿದ್ದಾರೆ. ಅಲ್ಲದೆ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಅವರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.