ನವದೆಹಲಿ, ಮಾ 02 (DaijiworldNews/DB): ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಉಕ್ರೇನ್ನಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಶಮನ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತಕ್ಕೆ ಭೇಟಿ ನೀಡಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ನಂತರ ಗುರುವಾ ಜಂಟಿ ಹೇಳಿಕೆಯಲ್ಲಿ ಮಾತನಾಡಿದ ಮೋದಿ, ಭಾರತವು ಈ ವಿಚಾರವನ್ನು ಆರಂಭದಿಂದಲೇ ಹೇಳುತ್ತಲೇ ಬಂದಿದೆ. ಈಗಲೂ ರಾಜತಾಂತ್ರಿಕ ಮಾರ್ಗ ಮತ್ತು ಮಾತುಕತೆಗಳ ಮೂಲಕ ಬಿಕ್ಕಟ್ಟು ಶಮನವಾಗಬಹುದು ಎಂಬುದನ್ನು ಭಾರತ ಪುನರುಚ್ಚರಿಸುತ್ತದೆ ಎಂದರು.
ಉಕ್ರೇನ್ ಮತ್ತು ರಷ್ಯಾ ನಡುವಿನ ಸಮರ ನಿಲ್ಲಲು ಜಿ20 ಅಧ್ಯಕ್ಷ ಸ್ಥಾನ ಹೊಂದಿರುವ ಭಾರತವು ಪ್ರಮುಖ ಪಾತ್ರ ವಹಿಸಲಿದೆ ಎಂಬ ಭರವಸೆ ನಮಗಿದೆ. ಭಾರತದಿಂದ ನಾವು ಈ ನಿಟ್ಟಿನಲ್ಲಿ ಇನ್ನಷ್ಟು ಕ್ರಮಗಳನ್ನು ನಿರೀಕ್ಷಿಸುತ್ತೇವೆ ಎಂದರು.
ಭಾರತ ಮತ್ತು ಇಟಲಿಯ ನಡುವೆ ಸ್ಟಾರ್ಟ್ ಅಪ್ ಸೇತುವೆ ನಿರ್ಮಾಣ ಮಾಡಲಿವೆ. ಇದಕ್ಕೆ ನಮ್ಮ ಬೆಂಬಲ ಸದಾ ಇದೆ. ಉಭಯ ದೇಶಗಳು ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಕರಿಸಿಕೊಂಡು ಹೊಸ ಅಧ್ಯಾಯ ಆರಂಭಕ್ಕೆ ಮುಂದಾಗಲಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಜಂಟಿ ಅಭ್ಯಾಸ, ತರಬೇತಿಗಳನ್ನು ನೀಡಿ ಈ ಕ್ಷೇತ್ರದಲ್ಲಿ ಮಾನವ ಸಾಮರ್ಥ್ಯವನ್ನು ಹೆಚ್ಚಿಸಲಿದ್ದೇವೆ. ಭಯೋತ್ಪಾದನೆ, ಪ್ರತ್ಯೇಕವಾದದ ವಿರುದ್ದ ಎರಡೂ ದೇಶಗಳು ಸದಾ ಹೋರಾಡಲಿವೆ. ಈ ವಿಚಾರ ಸಂಬಂಧಿಸಿ ಮಹತ್ವದ ಚರ್ಚೆಗಳು ನಡೆದಿವೆ ಎಂದರು.