ಬೆಳಗಾವಿ, ಮಾ 02 (DaijiworldNews/DB): ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಡಿ.ಬಿ. ಇನಾಮ್ದಾರ್ ಅವರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೋಜನ ಸವಿದಿದ್ದಾರೆ. ಅವರಿಗೆ ಸಿಎಂ ಬೊಮ್ಮಾಯಿ ಸಹಿತ ಹಲವು ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಕೇಂದ್ರ ರಕ್ಷಣಾ ಇಲಾಖೆ ಸಚಿವ ರಾಜನಾಥ್ ಸಿಂಗ್ ಅವರು ಕಿತ್ತೂರು ಹೊರವಲಯದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಡಿ.ಬಿ.ಇನಾಮ್ದಾರ್ ಅವರೊಂದಿಗೆ ಊಟ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳ ಹಾಗೂ ಪ್ರಲ್ಹಾದ್ ಜೋಶಿ ಕೂಡಾ ಇವರೊಂದಿಗೆ ಭೋಜನ ಸವಿದಿದ್ದಾರೆ. ಇನಾಮ್ದಾರ್ ಅವರು ಕಿತ್ತೂರು ಕ್ಷೇತ್ರದ ಕಾಂಗ್ರೆಸ್ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಇನ್ನು ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಎರಡನೇ ರಥಕ್ಕೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಚಾಲನೆ ನೀಡಿದ ರಾಜನಾಥ್ ಸಿಂಗ್, ತ್ರಿಪುರಾ, ನಾಗಾಲ್ಯಾಂಡ್ನಲ್ಲಿ ಬಿಜೆಪಿ ಜಯ ಗಳಿಸಿರುವುದು ಬಿಜೆಪಿ ಪಾಲಿಗೆ ಇಂದು ಸಿಕ್ಕ ಶುಭ ದಿನ. ಮೇಘಾಲಯದಲ್ಲಿಯೂ ಪಕ್ಷಕ್ಕೆ ಹೆಚ್ಚಿನ ಸ್ಥಾನ ಲಭಿಸಿರುವುದು ಖುಷಿಯ ಸಂಗತಿ ಎಂದರು.
ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಿ, ಈ ರಾಜ್ಯವನ್ನು ದಕ್ಷಿಣ ಭಾರತದ ನಂಬರ್ ವನ್ ರಾಜ್ಯ ಮಾಡುವಲ್ಲಿ ನಮ್ಮ ಶ್ರಮವನ್ನು ಹಾಕುತ್ತೇವೆ. ಐದು ದಶಕಗಳಲ್ಲಿ ಕಾಂಗ್ರೆಸ್ ಮಾಡದ ಕೆಲಸವನ್ನು ಒಂಬತ್ತೇ ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿದೆ ಎಂದು ಹೇಳಿದರು.
ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಕರ್ನಾಟಕದಲ್ಲಿ ಆರಂಭವಾಗಿದೆ. ಇಂಡಸ್ಟ್ರೀಸ್ ಕಾರಿಡಾರ್ ಕಲ್ಪನೆ ಸಾಕಾರಗೊಳ್ಳುತ್ತಿದೆ. ಇದರಿಂದ ರಾಜ್ಯದ ಯುವಕರು ಉದ್ಯೋಗಕ್ಕಾಗಿ ಬೇರೆಡೆ ತೆರಳುವುದು ತಪ್ಪಲಿದೆ. ರಾಜ್ಯದಲ್ಲಿ ಮೂರು ಇಂತಹ ಕಾರಿಡಾರ್ ನಿರ್ಮಾಣಗೊಂಡಿರುವುದು ಇಲ್ಲಿನ ಯುವಕರಿಗೆ ಆಶಾಕಿರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.