ಕೋಲ್ಕತ್ತಾ, ಮಾ 03 (DaijiworldNews/HR): ಮುಂದಿನ ವರ್ಷದ ರಾಷ್ಟ್ರೀಯ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಜನರ ಬೆಂಬಲದೊಂದಿಗೆ ಏಕಾಂಗಿಯಾಗಿ ಹೋರಾಡಲಿದೆ ಎಂದು ಪಕ್ಷದ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ತೃಣಮೂಲವನ್ನು ಸೋಲಿಸಲು ಕಾಂಗ್ರೆಸ್ ಪಕ್ಷವು ಸಿಪಿಐ(ಎಂ) ಜೊತೆಗೆ ಬಿಜೆಪಿಯೊಂದಿಗೂ ಒಪ್ಪಂದ ಮಾಡಿಕೊಂಡಿದೆ. ಅಪವಿತ್ರ ಮೈತ್ರಿ ಮಾಡಿಕೊಂಡರೆ ಬಿಜೆಪಿ ಜೊತೆ ಕಾಂಗ್ರೆಸ್ ಹೇಗೆ ಸೆಣಸುತ್ತದೆ, ಬಿಜೆಪಿ ವಿರುದ್ಧ ಎಡಪಕ್ಷಗಳು ಹೇಗೆ ಹೋರಾಡುತ್ತವೆ.. ಸಿಪಿಎಂ ಮತ್ತು ಕಾಂಗ್ರೆಸ್ ಬಿಜೆಪಿ ವಿರೋಧಿ ಎಂದು ಹೇಗೆ ಹೇಳಿಕೊಳ್ಳುತ್ತಿವೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಬಂಗಾಳದ ಸಾಗರ್ದಿಘಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಾರೂಢ ತೃಣಮೂಲದಿಂದ ವಿಧಾನಸಭಾ ಸ್ಥಾನವನ್ನು ಗೆದ್ದುಕೊಂಡಿದೆ. ಇದಕ್ಕೆ ಟೀಕೆ ಮಾಡಿರುವ ಮಮತಾ ಬ್ಯಾನರ್ಜಿ ಕಾಂಗ್ರೆಸ್, ಎಡ ಮತ್ತು ಬಿಜೆಪಿ ಎಲ್ಲರೂ ಸಾಗರ್ದಿಘಿಯಲ್ಲಿ ಕೋಮುವಾದದ ಆಟವಾಡಿದ್ದಾರೆ ಎಂದು ಆರೋಪಿಸಿದ್ದಾರೆ.